ಮುಂಡಗೋಡ: ರಾಜ್ಯದ 13 ಜಿಲ್ಲೆಗಳಲ್ಲಿ ಒಟ್ಟು 36 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೆಲ್ಕೋ ಮತ್ತು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಸೋಲಾರ್ ಘಟಕ ಮತ್ತು ಆರೋಗ್ಯ ಪರಿಕರಗಳ ಅನುಷ್ಠಾನ ಮಾಡಿರುವುದಾಗಿ ಜಿ.ಐ.ಝೆಡ್ ಸಂಸ್ಥೆಯ ಟೆಕ್ನಿಕಲ್ ಎಕ್ಸ್‍ಪರ್ಟ್ ಯಶ್ವಂತ್ ದೊರೆಸ್ವಾಮಿ ಹೇಳಿದರು.
ತಾಲೂಕಿನ ಕಾತೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5.4ಕಿಲೋ ವ್ಯಾಟ್ ಸಾಮಥ್ರ್ಯದ, 7ಲಕ್ಷ ರೂ. ಮೌಲ್ಯದ ಸೋಲಾರ್ ಘಟಕ ಮತ್ತು ವೈದ್ಯಕೀಯ ಉಪಕರಣಗಳನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಶರದ ನಾಯಕ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಶರದ ನಾಯಕ ಮಾತನಾಡಿ, ಆರೋಗ್ಯ ಕೇಂದ್ರಕ್ಕೆ ಉತ್ತಮ ವ್ಯವಸ್ಥೆ ನೀಡಿದ್ದು ಈ ಮೂಲಕ ಯಾವುದೆ ಸಂದರ್ಭದಲ್ಲಿ ವಿದ್ಯುತ್ ಶಕ್ತಿಯ ತೊಂದರೆ ಇಲ್ಲದೆ ರೋಗಿಗಳಿಗೆ ತ್ವರಿತ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಇದು ನೇರವಾಗಿ ಸಮುದಾಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಸೆಲ್ಕೋ ಸಂಸ್ಥೆ ಅಧ್ಯಕ್ಷ ಥಾಮಸ್ ಪುಲ್ಲೆಂಕವ್ ಮಾತನಾಡಿದರು. ಸೆಲ್ಕೋ ಸೋಲಾರ್‍ನ ಡಿಜಿಎಂ ಪ್ರಸನ್ನ ಹೆಗಡೆ ಮಾತನಾಡಿ, ಬಡ ಜನರಿಗೆ ಅನುಕೂಲವಾಗಲೆಂದು ನಮ್ಮ ಸಂಸ್ಥೆಯಿಂದ ತಾಲೂಕಿನ ಕಾತೂರ, ಮಳಗಿ, ಹುನಗುಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 7ಲಕ್ಷ ರೂ. ಮೌಲ್ಯದ ಸೌರ ವಿದ್ಯುತ್ ಹಾಗೂ ವೈದ್ಯಕೀಯ ಉಪಕರಣಗಳನ್ನು ನೀಡಲಾಗುತ್ತಿದೆ. ಸೋಲಾರ್ ಅಳವಡಿಸುವುದರ ಜತೆಗೆ ಅದರ ನಿರ್ವಹಣೆಯನ್ನು ಸಹ ಮಾಡುತ್ತೇವೆ ಇದರಿಂದ ಎಲ್ಲರಿಗೂ ಸುದುಪಯೋಗವಾಗಲಿ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ನರೇಂದ್ರ ಪವಾರ, ಡಾ.ಎಚ್.ಎಫ್.ಇಂಗಳೆ, ಆರೋಗ್ಯ ಅಧಿಕಾರಿ ಕೌಸರ್, ಸುಧಿಪ್ತಾ ಘೋಷ, ಪಾರ್ಥ ಸಾರಥಿ, ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು. ಶಿರಸಿ ಸೆಲ್ಕೋ ವ್ಯವಸ್ಥಾಪಕ ಸುಬ್ರಾಯ ಹೆಗಡೆ ಮತ್ತು ಏರಿಯಾ ಮ್ಯಾನೇಜರ್ ಮಂಜುನಾಥ ಭಾಗ್ವತ್ ನಿರ್ವಹಿಸಿದರು.