ಶಿರಸಿ: ಧಾರವಾಡ ಹಾಲು ಒಕ್ಕೂಟದ ವತಿಯಿಂದ ಹೀಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ಲಕ್ಷ್ಮೀನಾರಾಯಣ ಹೆಗಡೆ, ಮಧುರವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ಸಂಜೀವ ನಾಯ್ಕ, ತಾರಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ಶಿವಾನಂದ ಭಟ್ ಇವರುಗಳ ಜಾನುವಾರುಗಳು ಮರಣ ಹೊಂದಿದ ಕಾರಣ ಜಾನುವಾರು ವಿಮೆಯ ಅಡಿಯಲ್ಲಿ ತಲಾ ರೂ.35,000, ರೂ.32,000, ರೂ.32,000 ಗಳ ಮೊತ್ತದ ಚೆಕ್’ಗಳನ್ನು ಮರಣ ಹೊಂದಿದ ಜಾನುವಾರುಗಳ ವಾರಸುದಾರರಿಗೆ ಧಾರವಾಡ ಹಾಲು ಒಕ್ಕೂಟದ ಉತ್ಪಾದಕರ ಸಹಕಾರಿ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿಯ ನಿರ್ದೇಶಕರಾದ ಸುರೇಶ್ಚಂದ್ರ ಕೆ ಹೆಗಡೆ ಕೆಶಿನ್ಮನೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಧಾರವಾಡ ಹಾಲು ಒಕ್ಕೂಟದ ವತಿಯಿಂದ ಪಿ.ಪಿ.ಪಿ. ಯೋಜನೆಯ ಅಡಿಯಲ್ಲಿ ಇದೇ ಡಿಸೆಂಬರ್ ತಿಂಗಳಿನಲ್ಲಿ ಜಿಲ್ಲೆಯ ಬಹುವರ್ಷಗಳ ಬೇಡಿಕೆಯಾದ ಹಾಲಿನ ಪ್ಯಾಕಿಂಗ್ ಘಟಕ ಶಿರಸಿಯ ಹನುಮಂತಿಯಲ್ಲಿ ಪ್ರಾರಂಭವಾಗುತ್ತಿದ್ದು, ಜಿಲ್ಲೆಯಲ್ಲಿ ನಂದಿನಿ ಹಾಲಿನ ಮಾರಾಟ ದಿನದಿಂದ ದಿನ ಗಣನೀಯವಾಗಿ ಹೆಚ್ಚಾಗುತ್ತಿದೆ, ಕಾರಣ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕ ರೈತರುಗಳು ಈ ವಿಷಯವನ್ನು ವಿಶೇಷವಾಗಿ ಪರಿಗಣಿಸಿ ಇನ್ನೂ ಅತೀ ಹೆಚ್ಚಿನ ಹಾಲು ಉತ್ಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಇನ್ನೂ ಹೆಚ್ಚಿನ ಹಾಲಿನ ಶೇಖರಣೆ ಒಕ್ಕೂಟಕ್ಕೆ ಬರುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಬೇಕು ಎಂದು ಈ ಮೂಲಕ ಅವರು ಕರೆನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ಮಾರುಕಟ್ಟೆ ಅಧಿಕಾರಿಯಾದ ಬಸವರಾಜ ಸಲೋನಿ, ಪಶು ವೈದ್ಯಾಧಿಕಾರಿಗಳಾದ ಡಾ. ರಾಕೇಶ ತಲ್ಲೂರ್ ಮಧುರವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಅಶೋಕ ಕೆ ನಾಯ್ಕ, ಹೀಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀಧರ ಹೆಗಡೆ, ಶಿರಸಿ ಉಪವಿಭಾಗದ ಗುರುದರ್ಶನ ಭಟ್, ವಿಸ್ತರಣಾ ಸಮಾಲೋಚಕರುಗಳಾದ ದಯಾನಂದ ಬೋರ್ಕರ್, ಅಭಿಷೇಕ ನಾಯ್ಕ ಹಾಗೂ ಜಯಂತಪಟಗಾರ ಇವರುಗಳು ಉಪಸ್ಥಿತರಿದ್ದರು.