ಅಂಕೋಲಾ: ಆಹಾರ ಅರಸುತ್ತ ಮುಖಕ್ಕೆ ಪ್ಲಾಸ್ಟಿಕ್ ಡಬ್ಬಿ ಸಿಕ್ಕಿಸಿಕೊಂಡು ಒದ್ದಾಡುತ್ತಿದ್ದ ನಾಯಿಯನ್ನು ಲಕ್ಷ್ಮೇಶ್ವರದಲ್ಲಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಮರಿ ಹಾಕಿದ ನಾಯಿಯೊಂದು ಆಹಾರ ಅರಸುತ್ತ ಮುಖಕ್ಕೆ ಡಬ್ಬಿಯೊಂದನ್ನು ಸಿಲುಕಿಸಿಕೊಂಡು ಆಹಾರ ತಿನ್ನಲಾಗದೆ, ಮರಿಗಳಿಗೂ ಹಾಲುಣಿಸದೇ ಮೂರ್ನಾಲ್ಕು ದಿನಗಳಿಂದ ಅಲ್ಲಿ ಇಲ್ಲಿ ಸುತ್ತುತ್ತಿತ್ತು. ಸ್ಥಳೀಯರು ಡಬ್ಬಿ ತೆರವುಗೊಳಿಸಲು ಪ್ರಯತ್ನಿಸಿದರೂ ನಾಯಿಯ ಆರ್ಭಟದಿಂದ ಆರಂಭದ ಒಂದೆರಡು ದಿನ ಸಾಧ್ಯವಾಗಿರಲಿಲ್ಲ. ಆಹಾರವಿಲ್ಲದೇ ನಾಯಿಯೂ ಪ್ರಾಣಾಪಾಯದಲ್ಲಿತ್ತು. ಡಬ್ಬಿಯ ಒಳಗೆ ಪ್ಲಾಸ್ಟಿಕ್ ಕೊಟ್ಟೆ (ಚೀಲ) ಇದ್ದದರಿಂದ ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿತ್ತು.
ಸ್ಥಳೀಯರು ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದ್ದರು. ಅಗ್ನಿಶಾಮಕ ಠಾಣೆಯ ಈಶ್ವರ ನಾಯ್ಕ, ಜೀವನ ಬಬ್ರುಕರ, ಅಮಿತ ನಾಯ್ಕ ಮತ್ತು ವಿಘ್ನೇಶ್ವರ ನಾಯ್ಕ, ಗಣೇಶ ಶೇಟ್ ಅಗ್ನಿಶಾಮಕ ಚಾಲಕ ಸೀತಾರಾಮ ನಾಯ್ಕ ಸ್ಥಳಕ್ಕೆ ಬಂದು ಪ್ರಾಣಾಪಾಯದಲ್ಲಿದ್ದ ನಾಯಿಯನ್ನು ರಕ್ಷಿಸಿದರು. ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರಾದ ರಾಜು ನಾಯಕ, ಶಿವಾ ನಾಯ್ಕ ಸಹಕರಿಸಿದರು.