ಅಂಕೋಲಾ: ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಗೆ ವಿವಿಧೆಡೆ ಬೆಳೆಗಳಿಗೆ ಹಾನಿಯಾಗಿದ್ದು, ತಾಲೂಕಿನ ಹಾರವಾಡ ಗ್ರಾ.ಪಂ ವ್ಯಾಪ್ತಿಯ ವಿವಿಧ ಪ್ರದೇಶದ ಕೃಷಿ ಜಮೀನಿಗೆ ನೀರು ನುಗ್ಗಿ ಹಾನಿಯಾಗಿ ರೈತರ ಫಸಲು ನೀರಿನಲ್ಲಿ ಒದ್ದೆಯಾಗಿ ಕೈಗೆ ಬಂದದ್ದು ಬಾಯಿಗಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಾವಿರಾರು ರೂಪಾಯಿಗಟ್ಟಲೇ ಖರ್ಚು ಮಾಡಿ ಬೆಳೆದಿದ್ದ ಬೆಳೆ ಮಳೆಯಿಂದ ಒದ್ದೆಯಾಗಿ ಹಾನಿಯಾಗಿದೆ. ಕಟಾವು ಮಾಡಲಾಗಿರೋ ಭತ್ತದ ಬೆಳೆಗೆ ಇದೀಗ ಮೊಳಕೆ ಬಂದಿದ್ದು, ಅತ್ತ ಭತ್ತವು ಸಿಗದೆ, ಇತ್ತ ಜಾನುವಾರುಗಳಿಗೆ ಮೇಯಲು ಹುಲ್ಲು ಸಿಗದಂತ ಪರಿಸ್ಥಿತಿ ಎದುರಾಗಿದೆ.
ಪ್ರತಿವರ್ಷ ಇಷ್ಟೊತ್ತಿಗಾಗಲೇ ಭತ್ತ ಪೈರು ಕಟಾವು ಮಾಡಿ ಮುಗಿಯಬೇಕಿತ್ತು. ಆದರೆ ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಹಿನ್ನಡೆ ಉಂಟಾಗಿದೆ. ರೈತರು ವರ್ಷವಿಡೀ ಬೆವರು ಸುರಿಸಿ ಹೊಲದಲ್ಲಿ ಬೆಳೆದ ಬೆಳೆಯನ್ನು ಅಕಾಲಿಕ ಮಳೆ ಆಹುತಿ ತೆಗೆದುಕೊಂಡಿದ್ದು, ರೈತರ ವರ್ಷದ ಕೂಳಿಗೆ ಕುತ್ತು ತಂದಿದೆ. ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕಾಗಿ ಸರರ್ಕಾರಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಸುಭಾಷ ನಾಯ್ಕ ಆಗ್ರಹಿಸಿದ್ದಾರೆ.