ಕಾರವಾರ: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಗಣಪತಿ ಉಳ್ವೇಕರ್ ಸ್ಪರ್ಧೆಗೆ ನಿಂತಿದ್ದು, ತಾಲೂಕಿನ ಕಾರವಾರ ನಗರವ್ಯಾಪ್ತಿ, ಚಿತ್ತಾಕುಲ, ಕೆರವಡಿ, ಕದ್ರಾ, ಗೋಟೆಗಾಳಿ, ಘಾಡಸಾಯಿ, ಹಣಕೋಣ, ದೇವಳಮಕ್ಕಿ, ಮಲ್ಲಾಪುರ ಗ್ರಾಮ ಪಂಚಾಯತ ಸದಸ್ಯರೊಂದಿಗೆ ಸಭೆ ನಡೆಸಿದರು.
ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 12 ವರ್ಷಗಳಿಂದ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರು ಆಡಳಿತ ನಡೆಸಿದ್ದಾರೆ. ಆದರೆ ಅವರು ಇತ್ತೀಚಿಗೆ ಬಹಿರಂಗವಾಗಿ ಒಂದು ಹೇಳಿಕೆಯನ್ನು ನೀಡಿ, ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಸ್ಥಾನಕ್ಕೆ ದಮ್ಮಿಲ್ಲ. ಹೀಗಾಗಿ ತಾನು ಎಂಎಲ್‍ಎ ಆಗುತ್ತೇನೆಂದು ಹೇಳುವ ಮೂಲಕ ತನಗೆ ಮತ ಹಾಕಿದ ಹಾಗೂ ಎರಡು ಬಾರಿ ಆಯ್ಕೆ ಮಾಡಿದ ಚುನಾಯಿತ ಮತದಾರರಿಗೆ ಅವಮಾನ ಮಾಡಿದ್ದಾರೆ ಎಂದರು.
ಮೋದಿಯವರ ಕಾಲದಲ್ಲಿ ಸ್ವಚ್ಛ ಭಾರತ್ ಹಾಗೂ ಗ್ರಾಮೀಣ ವಿಕಾಸದಂತಹ ಹಲವು ಅಭಿವೃದ್ಧಿ ಯೋಜನೆಗಳನ್ನು ಈಗಾಗಲೇ ಗ್ರಾಮ ಮಟ್ಟದಲ್ಲಿ ತರಲಾಗಿದೆ. ಅಮೃತ ಸಿಟಿಯಂತಹ ಯೋಜನೆಯನ್ನು ಹಾಗೂ ಸ್ಮಾರ್ಟ್ ಸಿಟಿ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೊಳಿಸಿದ್ದು, ಹಲವು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಇದರಿಂದ ಭಾರಿ ಅನುದಾನ ಸಿಕ್ಕು ಅಲ್ಲಿನ ಜನತೆಗೆ ಉಪಯೋಗವಾಗಿದೆ.
ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸಡಕ್ ಯೋಜನೆಗಳು, ಸ್ವಚ್ಛ ಜಲ ಯೋಜನೆ, ಸ್ವಚ್ಛ ಗ್ರಾಮ ಯೋಜನೆ ಹೀಗೆ ಹಲವು ಯೋಜನೆಗಳನ್ನು ಗ್ರಾಮ ಪಂಚಾಯತ ಹಾಗೂ ಪಟ್ಟಣ ಪಂಚಾಯತ, ನಗರಸಭೆ ಮುಂತಾದ ಸ್ಥಳೀಯ ಸಂಸ್ಥೆಗಳ ಮೂಲಕ ಮಾಡಿಸುತ್ತಿದೆ. ಇದು ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಅತ್ಯಂತ ಉಪಯೋಗವಾಗಿದ್ದು, ಪ್ರತಿ ಮನೆಗೊಂದು ಶೌಚಾಲಯವನ್ನು ಗ್ರಾಮ ಪಂಚಾಯತ ಮೂಲಕ ಕಟ್ಟಿಸಲಾಗುತ್ತಿದೆ. ನಾನು ಆಯ್ಕೆಯಾದರೆ ಪ್ರತಿ ಗ್ರಾಮ ಪಂಚಾಯಿತಿಗೆ ಸ್ಥಳೀಯ ಬಿಜೆಪಿ ಶಾಸಕರ ಸಹಾಯದಿಂದ ಹೆಚ್ಚಿನ ಅನುದಾನವನ್ನು ತರಲು ಪ್ರಯತ್ನಿಸುತ್ತೇನೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದರು.
ನಮ್ಮ ಜಿಲ್ಲೆಯ ಸಂಸದರು, 5 ಜನ ಶಾಸಕರು, ಸ್ಥಳೀಯ ಸಂಸ್ಥೆಗಳ ಸದಸ್ಯರು ಬಹುತೇಕ ಭಾರತೀಯ ಜನತಾ ಪಾರ್ಟಿಯವರೇ ಆಗಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ನನ್ನ ಆಯ್ಕೆ ಹೆಚ್ಚಿನ ಸಹಾಯ ಮಾಡುತ್ತದೆ. ಹೀಗಾಗಿ ಮತದಾರರು ತನಗೇ ಮತ ನೀಡಬೇಕಾಗಿ ವಿನಂತಿಸಿದರು.
ಶಾಸಕಿ ರೂಪಾಲಿ ನಾಯ್ಕ ಸಭೆ ಉದ್ದೇಶಿಸಿ ಮಾತನಾಡಿ, ಮಲ್ಲಾಪುರ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಬಿಜೆಪಿ ಬೆಂಬಲಿತರು ಇದ್ದಾರೆ. ನಮ್ಮ ಅಭ್ಯರ್ಥಿಯಾದ ಗಣಪತಿ ಉಳ್ವೇಕರ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕು. ಒಂದೂ ಮತ ಹಾಳಾಗದಂತೆ ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಭಾರಿ ಗೋವಿಂದ ನಾಯ್ಕ, ಕಾರವಾರ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ನಗರಾಧ್ಯಕ್ಷ ನಾಗೇಶ ಕುರ್ಡೇಕರ್, ನಗರಸಭೆ ಅಧ್ಯಕ್ಷ ಡಾ. ನಿತೀನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಗ್ರಾಮೀಣ ಪ್ರಧಾನ ಕಾರ್ಯದರ್ಶಿ ದತ್ತಾರಾಮ ಬಾಂದೇಕರ, ಬಿಜೆಪಿ ವಕ್ತಾರ ನಾಗರಾಜ ನಾಯಕ, ಸುಜಾತಾ ಬಾಂದೇಕರ, ಅಂಕೋಲಾ ಮಂಡಲದ ಪ್ರಧಾನ ಕಾರ್ಯದರ್ಶಿ ರಾಘು ಭಟ್ಟ, ಎಸ್.ಸಿ ಮೊರ್ಚಾ ಜಿಲ್ಲಾಧ್ಯಕ್ಷ ಉದಯ ಬಶೆಟ್ಟಿ ಉಪಸ್ಥಿತರಿದ್ದರು.