ಹೊನ್ನಾವರ: ಇಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಿ ಪರೀಕ್ಷೆ ಬರೆಯಲು ಅವಕಾಶ ನೀಡದೇ ವಂಚಿಸಿದ ಸಿಬ್ಬಂದಿಯ ವಿರುದ್ಧ ಧಿಕ್ಕಾರ ಕೂಗಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2021 ರ ಪೂರಕ ಪರೀಕ್ಷೆಯಲ್ಲಿ 2018-20 ನೇ ಸಾಲಿನ ಟ್ರೇನೀಗಳಿಗೆ ಬೇಕಾಬಿಟ್ಟಿ ಫೀಸು ವಸೂಲು ಮಾಡಿ ರಸೀದಿ ನೀಡದೇ ವಂಚಿಸಿದ್ದಾರೆ. ಪರೀಕ್ಷೆ ಬರೆಯಲು ಕೂಡ ಅವಕಾಶ ನೀಡಿಲ್ಲ. ವಂಚನೆ ಮಾಡಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳು ಕೈಗಾರಿಕಾ ತರಬೇತಿ ಉದ್ಯೋಗ ಇಲಾಖೆ ಆಯುಕ್ತರಿಗೆ ದೂರು ಸಹ ನೀಡಿದ್ದು, ವಂಚನೆ ಎಸಗಿರುವ ನೌಕರನ ವಿರುದ್ಧ ಸೂಕ್ತ ತನಿಖೆ ಕೈಗೊಂಡು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಉದಯರಾಜ ಮೇಸ್ತ ಮಾತನಾಡಿ, ದ್ವಿತೀಯ ದರ್ಜೆ ಸಹಾಯಕ ಹುದ್ದೆಯಲ್ಲಿರುವ ಪ್ರಮೋದ ಸಣ್ಣಭೋಮಾಜಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದ್ದು, ಆತನ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಂಡು ವಂಚನೆಗೆ ಒಳಗಾದ ಸುಮಾರು 38 ವಿದ್ಯಾರ್ಥಿಗಳಗೆ ರಸೀದಿ ನೀಡದೇ ವಸೂಲು ಮಾಡಿರುವ ಸಂಪೂರ್ಣ ಹಣವನ್ನು ನೌಕರನಿಂದ ವಸೂಲು ಮಾಡಿ ನೀಡಬೇಕು ಹಾಗೂ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆ ಬರೆಯುವ ಅವಕಾಶ ಒದಗಿಸಬೇಕಾಗಿ ಆಗ್ರಹಿಸಿದರು.
ಐಟಿಐ ವಿದ್ಯಾರ್ಥಿ ವಿಶಾಲ ಮಾತನಾಡಿ, ಪೂರಕ ಪರೀಕ್ಷೆಗೆ ನಮ್ಮಿಂದ ಹೆಚ್ಚಿನ ಹಣವನ್ನು ಪಾವತಿಸಿಕೊಂಡಿದ್ದಾರೆ. ಯಾವುದೇ ರಶೀದಿ ನೀಡಿಲ್ಲ. ಪರೀಕ್ಷೆ ಬರೆದರೂ ಕೂಡ ನಮಗೆ ಫಲಿತಾಂಶ ನೀಡಿಲ್ಲ ಎಂದರು. ಈ ಸಂದರ್ಭದಲ್ಲಿ ಸುಧಾಕರ ಹೊನ್ನಾವರ, ಗಣಪತಿ ಮೇಸ್ತ, ಶ್ರೀಕಾಂತ ಮೇಸ್ತ, ಪ್ರದೀಪ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.