ಶಿರಸಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 90 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಾಲೂಕಿನ ದೇವನಹಳ್ಳಿ ಸರಕಾರಿ ಪ್ರೌಢಶಾಲೆಯ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
2020-21 ನೇ ಸಾಲಿನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 90 ಕ್ಕಿಂತ ಅಧಿಕ ಅಂಕ ಪಡೆದ 14 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯಾಧ್ಯಾಪಕ ಎಸ್ ವಿ ಭಾಗ್ವತ, ಮತ್ತಿಘಟ್ಟ, ಸರಗುಪ್ಪಾ, ಹುಳ್ಳೇಬೈಲ್, ಬೆಣಗಾಂವ, ಕರೂರು, ಕುದ್ರಗೋಡ್, ದೇವನಳ್ಳಿ ಮುಂತಾದ ಸಣ್ಣ ಹಳ್ಳಿಗಳಿಂದ ಗ್ರಾಮೀಣ ಭಾಗದ ಮಕ್ಕಳು 8, 9, 10 ನೇ ತರಗತಿಗೆ ಬರುತ್ತಿದ್ದು, ಮಕ್ಕಳು ಸತತ ತಮ್ಮ ಪರಿಶ್ರಮದಿಂದ ಮತ್ತು ಪ್ರೌಢಶಾಲೆಯ ಶಿಕ್ಷಕವೃಂದದ ಉತ್ತಮ ಮಾರ್ಗದರ್ಶನದಿಂದ
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪ್ರತೀ ವರ್ಷವೂ ಉತ್ತಮ ಫಲಿತಾಂಶ ಬರುತ್ತಿದೆ. ಈ ಸಾಧನೆಯಿಂದ ಬೇರೆಯವರಿಗೂ ಸಾಧನೆ ಮಾಡಲು ಪ್ರೇರಣೆ ನೀಡಲಿ ಎಂದರು.
ಶಿಕ್ಷಕ ಎಸ್.ಆರ್ ಪೈ ಸ್ವಾಗತಿಸಿದರು. ಅಮಿತಾ ಎಸ್ ಭಟ್ಟ ವಂದಿಸಿದರು. ಆರ್.ಪಿ ಹೆಗಡೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಎಸ್‍ಡಿಎಮ್‍ಸಿ ಉಪಾಧ್ಯಕ್ಷ ದೇವರಾಜ ಮರಾಠಿ, ವಿದ್ಯಾರ್ಥಿಗಳ ಪಾಲಕರು, ಗ್ರಾಮಸ್ಥರು ಇದ್ದರು.