ಭಟ್ಕಳ: ವಿಶ್ವ ಪ್ರಸಿದ್ಧ ಮುರುಡೇಶ್ವರ ಶಿವನ ಮೂರ್ತಿಯ ಶಿರಚ್ಛೇದನ ಮಾಡಿದ ಮಾಡಿದ ಚಿತ್ರವನ್ನು ಐಸಿಸ್ ಉಗ್ರ ಸಂಘಟನೆಯ ಮ್ಯಾಗಜೀನ್ ದಿ ವಾಯ್ಸ್ ಆಫ್ ಹಿಂದ್ ನಲ್ಲಿ ಪ್ರಸಾರಗೊಳಿಸಿದ ಹಿನ್ನೆಲೆಯಲ್ಲಿ ಮುರುಡೇಶ್ವರದ ದೇವಸ್ಥಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜಿಲ್ಲೆಯ ಹಲವು ಪೊಲೀಸ್ ಸಿಬ್ಬಂದಿಗಳು ದೇವಸ್ಥಾನದ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ದೇವಸ್ಥಾನಕ್ಕೆ ಬರುವ ಪ್ರತಿಯೋರ್ವರನ್ನೂ ತಪಾಸಣೆಗೊಳಿಸಿ ದೇವಸ್ಥಾನದ ಒಳಗೆ ಬಿಡಲಾಗುತ್ತಿದೆ. ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿಗಳು ಸಮುದ್ರದಲ್ಲಿ ಬೋಟಿನಲ್ಲಿ ಗಸ್ತು ನಡೆಸಿ, ಭದ್ರತೆ ಒದಗಿಸಿದ್ದಾರೆ. ದೇವಸ್ಥಾನದ ಹಲವು ಆಯಕಟ್ಟಿನ ಸ್ಥಳದಲ್ಲಿ ಸಿ.ಸಿ. ಕ್ಯಾಮರಾವನ್ನು ಅಳವಡಿಸಿದ್ದು, ಮುರುಡೇಶ್ವರಕ್ಕೆ ಬರುವ ಪ್ರತಿಯೋರ್ವರ ಮೇಲೂ ನಿಗಾ ಇಡಲು ಯೋಜನೆ ನಿರೂಪಿಸಲಾಗಿದೆ ಎಂದು ಪೊಲಿಸ್ ಮೂಲಗಳು ತಿಳಿಸಿವೆ.