ಶಿರಸಿ: ಕುಮಟಾದಿಂದ ಶಿರಸಿಗೆ ಹೋಗುವ ಮಾರ್ಗವು ಸಂಪೂರ್ಣ ಹದಗೆಟ್ಟಿದ್ದು ಅಗಲೀಕರಣದ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗುತ್ತಿದೆ. ಕಾಣದ ನಕಲಿ ಪರಿಸರ ವಾದಿಗಳು ಈ ಅಭಿವೃದ್ಧಿ ಕಾರ್ಯದಲ್ಲಿ ಹಾಲಿನಲ್ಲಿ ಹುಳಿ ಹಿಂಡುವಂತಹ ಕಾರ್ಯ ಮಾಡುತ್ತಿದ್ದಾರೆ. ಸರಕಾರ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕುಮಟಾ ತಾಲೂಕಾ ಅಧ್ಯಕ್ಷ ನಾಗರಾಜ ಎಸ್.ಶೇಟ ಆಗ್ರಹಿಸಿದ್ದಾರೆ.
ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ಚಿವುಟುವಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೂ ಈ ಒಂದು ನಕಲಿ ಪರಿಸರ ವಾದಿಗಳು ಯಾವುದೇ ರೀತಿಯಲ್ಲಿ ಮರ-ಗಿಡಗಳನ್ನು ಬೆಳೆಸುವಂತಹ ಕಾರ್ಯಗಳನ್ನು ಮಾಡುವುದು ನಮ್ಮ ಕಣ್ಣಿಗೆ ಕಂಡಿಲ್ಲ. ಹಾಗೂ ಸರಕಾರದ ಮುಂದೆ ಪರಿಸರ ಬೆಳೆಸುವುದರ ಬಗ್ಗೆ ಯಾವುದೇ ರೀತಿ ಬೇಡಿಕೆಯನ್ನು ಈ ವರೆಗೂ ಇಟ್ಟಿಲ್ಲ. ಗಿಡ ನೆಡುವ ಬಗ್ಗೆ ಯಾವುದೇ ಕಾರ್ಯಕ್ರಮ ಹಾಕಿಕೊಂಡಿಲ್ಲ. ನ್ಯಾಯಾಲಯವು ಇಂತಹವರ ಬೇಡಿಕೆ ತಿರಸ್ಕರಿಸಿ ಅವರಿಗೆ ದಂಡವನ್ನು ವಿಧಿಸಬೇಕು ಹಾಗೂ ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದೇ ಒಂದು ಕಾಣದ ಕೈ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಹಾಗೂ ಕಾಣದ ಕೈ ವಿರುದ್ಧ ಕೂಡ ಸೂಕ್ತ ಕ್ರಮವನ್ನು ಆಡಳಿತಾರೂಢ ಸರಕಾರ ಕೈಗೊಳ್ಳಬೇಕು. ಮುಂದಿನ ದಿನದಲ್ಲಿ ಇದೇ ರೀತಿಯಲ್ಲಿ ಮುಂದುವರಿದರೆ ನಾವು ವೇದಿಕೆ ವತಿಯಿಂದ ರಸ್ತೆ ತಡೆ ಹಮ್ಮಿಕೊಳ್ಳುತ್ತೇವೆ. ಅಲ್ಲದೇ ಸರಕಾರಿ ಆಸ್ತಿ ಪಾಸ್ತಿಗಳಿಗೆ ಹಾನಿ ಸಂಭವಿಸಿದಲ್ಲಿ ಅದಕ್ಕೆ ನೇರ ಹೋಣೆಯನ್ನು ಆಡಳಿತಾರೂಢ ಸರಕಾರ ಹೊರಬೇಕಾಗುತ್ತದೆ.
ಕಾರಣ ಈ ಕೂಡಲೇ ರಸ್ತೆ ಕಾಮಗಾರಿ ಅತೀ ಶೀಘ್ರವಾಗಿ ಕೈಗೊಂಡು ಸಾರ್ವಜನಿಕರ ಸಮಸ್ಯೆ ಪರಿಹಾರವಾಗುವಂತೆ ಕ್ರಮ ಕೈಗೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣ ಒತ್ತಾಯಿಸುತ್ತದೆ ಎಂದು ಪ್ರಕಣೆಯಲ್ಲಿ ತಿಳಿಸಿದ್ದಾರೆ.