ಹಳಿಯಾಳ: ಕಣ್ಣಿನ ಬಗ್ಗೆ ಹೆಚ್ಚಿನ ಕಾಳಜಿಯಿಂದಿರಿ, ನಮ್ಮ ಪ್ರಮುಖ ಜ್ಞಾನೇಂದ್ರಿಯಗಳಲ್ಲಿ ಕಣ್ಣು ಮುಖ್ಯವಾದ ಅಂಗ. ಅದರ ಬಗ್ಗೆ ಕಾಣಜಿ ಅಗತ್ಯ. ಇದಕ್ಕೆ ಶಿಬಿರಗಳು ನಡೆಸುತ್ತಿರುವ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಶಿರಸಿ ವಿಶ್ವ ಸೇವಾ ಸಮಿತಿ ಮತ್ತು ರೋಟರಿ ಆಸ್ಪತ್ರೆಯ ಸಂಯೋಜಕ ಗಿರೀಶ ಧಾರೆಶ್ವರ ತಿಳಿಸಿದರು.
ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ ಹಳಿಯಾಳ, ವಿಶ್ವ ಸೇವಾ ಸಮಿತಿ ಮತ್ತು ರೋಟರಿ ಕ್ಲಬ್ ಶಿರಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಕಾರವಾರ, ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಳಿಯಾಳ ಇವರ ಸಹಯೋಗದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯ ಸಭಾಭವನದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗ್ರಾಮೀಣ ಭಾಗದ ಜನರಿಗೆ ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ಮತ್ತು ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರದ ಸದುಪಯೋಗ ಪಡೆಯಲು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯ ನಿರ್ದೇಶಕ ಪ್ರಸನ್ನಕುಮಾರ ಕುಲಕರ್ಣಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ವ ಸೇವಾ ಸಮಿತಿ ರೋಟರಿ ಆಸ್ಪತ್ರೆ ಶಿರಸಿಯ ಡಾ. ಎ.ಜಿ.ವಸ್ತ್ರದ, ನೇತ್ರಾಧಿಕಾರಿ ತಾಜ್ಯೂದ್ದಿನ ಬಳ್ಳಾರಿ, ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ಯೋಜನಾಧಿಕಾರಿ ಸಂತೋಷ ಪರೀಟ ಮತ್ತು ವಿಶ್ವ ಸೇವಾ ಸಮಿತಿ ರೋಟರಿ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಿಬಿರದಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದ 167 ಕ್ಕೂ ಅಧಿಕ ಜನರ ಕಣ್ಣಿನ ತಪಾಸಣೆ ಮಾಡಲಾಯಿತು. ಇದರಲ್ಲಿ ಉಚಿತ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಗಾಗಿ 90 ಜನರಿಗೆ ಆಯ್ಕೆ ಮಾಡಲಾಗಿದ್ದು, ಇವರನ್ನು ಶಿರಸಿ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕ ಉಳವಯ್ಯಾ ಬೆಂಡಿಗೇರಿ ಸ್ವಾಗತಿಸಿದರು. ವಿಷ್ಣು ಮಡಿವಾಳ ನಿರೂಪಿಸಿ, ವಂದಿಸಿದರು. ಸಂಸ್ಥೆಯ ಸಂತೋಷ ಸಿದ್ನೇಕೊಪ್ಪ, ನಾರಾಯಣ ಗೊಂಧಳಿ, ತಿಲಕ ವಾಲೇಕರ ಮತ್ತು ವಿಶ್ವ ಸೇವಾ ಸಮಿತಿ ರೋಟರಿ ಆಸ್ಪತ್ರೆಯ ಸಿಬ್ಬಂದಿಗಳು ಸಹಕರಿಸಿದರು.