ಸಿದ್ದಾಪುರ: ‘ಮುರ್ಡೇಶ್ವರ ದೇವಸ್ಥಾನದ ವಿಗ್ರಹ ಧ್ವಂಸಗೊಳಿಸಿ ಐಸಿಸ್ ಧ್ವಜ ನೆಟ್ಟ ಚಿತ್ರ ಹರಿಬಿಟ್ಟವರ ಕುರಿತು ತನಿಖೆಗೆ ಸೂಚಿಸಲಾಗಿದೆ. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವದು. ದೇವಸ್ಥಾನಕ್ಕೆ ಸೋಮವಾರದಿಂದಲೆ ಭದ್ರತೆ ಹೆಚ್ಚಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಕಲಗದ್ದೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡುತ್ತ, ರಾಜ್ಯದ ಕರಾವಳಿ ಭಾಗದಲ್ಲಿ ಭದ್ರತೆ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರದ ನೆರವು ಕೇಳಿದ್ದೇವೆ. ಕರಾವಳಿ ಕಾವಲು ಪಡೆಗೆ 30 ಸುಸಜ್ಜಿತ ಬೋಟ್ ಗಳ ಬೇಡಿಕೆಯನ್ನೂ ಇಡಲಾಗಿದೆ ಎಂದರು.
ದೇಶದ್ರೋಹ ಚಟುವಟಿಕೆಯಲ್ಲಿ ಭಟ್ಕಳವೂ ಸೇರಿದಂತೆ ಕರಾವಳಿ ಭಾಗದ ಹಲವು ಯುವಕರು ಪಾಲ್ಗೊಳ್ಳುತ್ತಿರುವ ಸಂಶಯವಿದ್ದು, ಈ ಬಗ್ಗೆ ನಿಗಾ ಇಡಲಾಗುತ್ತಿದೆ. ಮೋದಿ ಸರ್ಕಾರ ಬಂದ ಮೇಲೆ ಬಾಂಬ್ ಸ್ಫೋಟದಂತಹ ಚಟುವಟಿಕೆ ತಗ್ಗಿದೆ ಎಂದರು. ‘ಎಸ್.ಡಿ.ಪಿ.ಐ., ಪಿ.ಎಫ್.ಐ. ಸಂಘಟನೆ ನಿಷೇಧಿಸುವ ನಿರ್ಧಾರ ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.