ಯಲ್ಲಾಪುರ: ಕಳೆದ ಎರಡು- ಮೂರು ದಿನದ ಹಿಂದೆ ಸುರಿದ ಮಹಾಮಳೆಗೆ ತುಡುಗುಣಿಯಿಂದ ಸೂರಿಮನೆಯ ಸಂಪರ್ಕಕ್ಕಿದ್ದ ಏಕೈಕ ರಸ್ತೆಯೇ ತುಡುಗುಣಿ ಬ್ರಿಜ್ಜಿನ ಹತ್ತಿರ ಕುಸಿತವಾಗಿ ಕೊಚ್ಚಿಹೋಗಿತ್ತು. ಬೆಳಿಗ್ಗೆ ಅದನ್ನು ಗಮನಿಸಿದ ಊರ ನಾಗರೀಕರು ಸುಮ್ಮನೆ ಕೈಕಟ್ಟಿ ಕೂರದೆ, ಮರು ನಿರ್ಮಾನ ಕಾರ್ಯ ಕೈಗೊಂಡಿದ್ದಾರೆ.
ಒಬ್ಬರ ಮನೆಯಿಂದ ಬುಟ್ಟಿ, ಮತ್ತೊಬ್ಬರ ಮನೆಯಿಂದ ಕುದ್ದಲಿ, ಕೆಲಸಕ್ಕೆ ಬೇಕಾದ ಪರಿಕರಗಳನ್ನೆಲ್ಲ ಒಟ್ಟು ಮಾಡಿದರು. ಜನರಿಗೆ ಹುರುಪು ತುಂಬಲು ಉಮ್ಮಚ್ಗಿ ಗ್ರಾ.ಪಂ.ನ ಸ್ಥಳೀಯ ಸದಸ್ಯರುಗಳಾದ ಖೈತಾನ್ ಡಿಸೋಜ, ಅಶೋಕ ಪೂಜಾರಿ ಟೊಂಕ ಕಟ್ಟಿ ನಿಂತರು. ಸುಧೀರ್ ಬಲ್ಸೆ ಚವತ್ತಿ, ನಾಗೇಂದ್ರ ಭಟ್ಟ ತುಡುಗುಣಿ ಸಾವಿರಾರು ಪ್ಲಾಸ್ಟಿಕ್ ಚೀಲಗಳನ್ನು ಒದಗಿಸಿದರು.
ಉಮ್ಮಚ್ಗಿ ಗ್ರಾ.ಪಂ. ಅಧ್ಯಕ್ಷೆ ರೂಪ ಪೂಜಾರಿ, ಗ್ರಾ.ಪಂ.ಸದಸ್ಯ ಕುಪ್ಪಯ್ಯ ಪೂಜಾರಿ, ಗುತ್ತಿಗೆದಾರ ಗೋವಿಂದ ಬಸಾಪೂರ ಮೊದಲಾದವರೂ ಕೈ ಸೇರಿಸಿದರು. ಜೆ.ಸಿ.ಬಿ.ಟ್ಯಾಕ್ಟರ್ ಗಳು ಕೆಲಸ ಪ್ರಾರಂಭಿಸಿದವು. ನೋಡ ನೋಡುತ್ತಿದ್ದಂತೆ ಕುಸಿದ ರಸ್ತೆಯ ಮರುನಿರ್ಮಾಣ ಕಾರ್ಯ ಶುರುವಾಯಿತು.
ಮಣ್ಣು ಕುಸಿದು ಹೋಗದಂತೆ ಪ್ಲಾಸ್ಟಿಕ್ ಚೀಲಗಳಿಗೆ ಮಣ್ಣು ತುಂಬಿ ಹೊಂದಿಸ ತೊಡಗಲಾಯಿತು. ಎಲ್ಲೆಲ್ಲಿಂದಲೋ ನೋಡಲು ಬಂದವರೂ ಒಂದಿಷ್ಟು ಹೊತ್ತು ತಮ್ಮ ಅಳಿಲುಸೇವೆ ಸಲ್ಲಿಸಿದರು. ರಾತ್ರಿ ಒಂಬತ್ತರ ಹೊತ್ತಿಗೆ ರಸ್ತೆ ಜನರ ಓಡಾಟಕ್ಕೆ ಮೊದಲಿನಂತೆ ಅನುವಾಗಿ, ಒಗ್ಗಟ್ಟಿನ ಬಲವನ್ನು ಸಾರಿ ಹೇಳಿತು.