ಸಿದ್ದಾಪುರ: ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರ ಬೆಳೆ ಹಾನಿಯಾಗಿದೆ. ಮುಖ್ಯವಾಗಿ ಕೊಯ್ತ ಮಾಡಿದ ಭತ್ತದ ಬೆಳೆಯು ಗದ್ದೆಯಲ್ಲಿ ನೀರು ನಿಂತು ಹಾನಿಯಾಗಿದೆ. ಕೆಲವೆಡೆ ಭತ್ತ ಅಲ್ಲೇ ಮೊಳಕೆಯಾಗುತ್ತಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮತ್ತು ಜಾನುವಾರುಗಳ ಮೇವಿಗೆ ಕೂಡ ಹುಲ್ಲು ಇಲ್ಲದಂತಾಗಿದೆ. ಇದಕ್ಕೆಲ್ಲ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಜೆಡಿಎಸ್ ಮುಖಂಡ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.
ತಾಲೂಕಿನ ಮಲವಳ್ಳಿ ಹಾಗೂ ಹಸುವಂತೆ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಭತ್ತ ಗದ್ದೆಗಳಿಗೆ ಪತ್ರಕರ್ತರನ್ನು ಕರೆಸಿ ಅಲ್ಲಿಯ ಬೆಳೆಗಾರರ ಪರಿಸ್ಥಿತಿಯನ್ನು ವಿವರಿಸಿದರು. ರೈತರು ಅನ್ನದಾತರು ಎನ್ನುವುದನ್ನು ಮರೆಯಬಾರದು. ಈಗಿನ ಕಾಲದಲ್ಲಿ ಭತ್ತ ಬೆಳೆಯುವ ರೈತರ ಸಂಖ್ಯೆ ಕಡಿಮೆ. ಅದರಲ್ಲೂ ಮಳೆಯಿಂದಾಗಿ ಬೆಳೆ ಹಾಳಾದರೆ ರೈತರ ಸಂಕಷ್ಟ ಕೇಳುವವರಾರು? ಇಂದು ಸರ್ಕಾರ ನೀಡುವ ಪರಿಹಾರ ಯಾವುದಕ್ಕೂ ಸಾಕಾಗುತ್ತಿಲ್ಲ. ಕಡಿಮೆ ಎಂದರೂ ಒಂದು ಏಕರೆಗೆ 25ಸಾವಿರ ರೂಗಳನ್ನು ನೀಡಿದರೆ ಮಾತ್ರ ರೈತರು ಉಳಿಯಲು ಸಾಧ್ಯ. ಇಲ್ಲದಿದ್ದರೆ ರೈತರು ಕಣ್ಣೀರಿನಲ್ಲಿ ಕಾಲಕಳೆಯುವ ಸ್ಥಿತಿ. ಒಂದೆಡೆ ಭತ್ತ ನಾಶವಾಗಿದೆ. ಇನ್ನೊಂದು ಕಡೆ ಹುಲ್ಲು ಕೊಳೆಯುತ್ತಿದೆ. ಇದರಿಂದ ಹೈನುಗಾರಿಕೆಯ ಮೇಲೂ ಪರಿಣಾಮ ಬೀರಲಿದೆ.
ಬೆಳೆಗಾರರಿಗೆ 20ದಿನದಲ್ಲಿ ಸೂಕ್ತ ಪರಿಹಾರ ನೀಡದಿದ್ದರೆ ತಾಲೂಕು ಕಚೇರಿ ಅಥವಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಹೇಳಿದರು.
ನಮ್ಮ ಜಮೀನು ತಂದೆ-ತಾಯಿ ಅವರ ಹೆಸರಿನಲ್ಲಿದೆ. ಅಲ್ಲದೇ ಕಳೆದ 40-45ವರ್ಷದಿಂದ ಅತಿಕ್ರಮಣ ಮಾಡಿಕೊಂಡು ಭತ್ತವನ್ನು ಬೆಳೆಯುತ್ತಿದ್ದೇವೆ. ಮಳೆಯಿಂದ ನಾವು ಬೆಳೆದ ಭತ್ತ ಸಂಪೂರ್ಣ ನಾಶವಾಗಿದೆ. ಭತ್ತದ ಬೀಜ ಮೊಳಕೆ ಒಡೆಯುತ್ತಿದ್ದು ಹುಲ್ಲು ಕೊಳೆತು ಹೋಗಿದೆ ಎಂದು ಮಲವಳ್ಳಿಯ ಅಣ್ಣಪ್ಪ ಚೌಡ ನಾಯ್ಕ, ನಾಗರಾಜ ನಾಯ್ಕ, ಸರೋಜ ನಾಯ್ಕ, ಸರಸ್ವತಿ ನಾಯ್ಕ, ಕನ್ನಪ್ಪ ನಾಯ್ಕ, ಬಂಗಾರಿ ನಾಯ್ಕ, ಬಸವರಾಜ ನಾಯ್ಕ, ಕೃಷ್ಣಮೂರ್ತಿ ನಾಯ್ಕ ಮತ್ತಿತರ ಬೆಳೆಗಾರರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಭತ್ತದ ಬೆಳೆ ಮಳೆಗೆ ಹಾನಿ ಆಗಿದೆ. ಭತ್ತದ ಕಾಳು ಯಾತಕ್ಕೂ ಬರುವುದಿಲ್ಲ. ಹುಲ್ಲು ಕೊಳೆತು ಹೋಗಿದೆ. ಬೆಳೆಯನ್ನು ಬೆಳೆಯಲು ಮಾಡಿದ್ದ ವೆಚ್ಚ ಯಾರು ಕೊಡುತ್ತಾರೆ. ನಾನು ಮಾತ್ರ ಬದುಕಿ ಉಳಿದಿದ್ದೇನೆ ಎಂದು ಹಸವಂತೆಯ ಲಕ್ಷ್ಮೀ ಮೈಲಾ ನಾಯ್ಕ ತನ್ನ ಅಳಲನ್ನು ಡಾ.ಶಶಿಭೂಷಣ ಹೆಗಡೆ ಅವರಲ್ಲಿ ಕಣ್ಣೀರು ಹಾಕುತ್ತ ವಿವರಿಸಿದರು.
ಜೆಡಿಎಸ್ ಪ್ರಮುಖರಾದ ಕೆ.ಎಂ.ಹೆಗಡೆ, ಸತೀಶ ಹೆಗಡೆ, ಮಲ್ಲಿಕಾರ್ಜುನ ಗೌಡರ್, ವೀರಭದ್ರ ನಾಯ್ಕ, ರಮೇಶ ಐಗಳಕೊಪ್ಪ, ವಾಸು ನಾಯ್ಕ ಕಿಲಾರ, ಗಜಾನನ ನಾಯ್ಕ ಗಟ್ಟಿಕೈ, ಅರುಣ ಗೌಡ, ಗೋಪಾಲ ನಾಯ್ಕ, ಶಂಕರ ನಾಯ್ಕ ಇತರರಿದ್ದರು.