ಅಂಕೋಲಾ: ನಮ್ಮ ದೇಹತ್ಯಾಗದ ನಂತರ ನೇತ್ರದಾನ ಮಾಡುವುದರಿಂದ ದೃಷ್ಠಿಹೀನರ ಬಾಳಲ್ಲಿ ಬೆಳಕಾಗಬಹುದು ಎಂದು ಆರೋಗ್ಯ ಇಲಾಖೆ ಬೆಳಸೆ ವಿಭಾಗದ ಡಾ.ಅರ್ಚನಾ ನಾಯ್ಕ ಹೇಳಿದರು.
ಅವರು ಪಟ್ಟಣದ ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನೇತ್ರದಾನ ಪ್ರತಿಜ್ಞಾ ಅಭಿಯಾನದಲ್ಲಿ ಮಾತನಾಡುತ್ತಿದ್ದರು. ದೃಷ್ಠಿ ಹೀನರ ಪರಿಸ್ಥಿತಿಯನ್ನು ಒಮ್ಮೆ ನಾವು ಅವಲೋಕಿಸಿ ನೇತ್ರದಾನದ ಪ್ರತಿಜ್ಞೆ ಮಾಡಬೇಕು. ಇದರಿಂದ ನಾವು ಸತ್ತಮೇಲೂ ಜೀವಂತವಾಗಿರಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ವಿನಾಯಕ ಜಿ ಹೆಗಡೆ, ಪ್ರಪಂಚದಲ್ಲಿ ಜೀವಂತ ಇರುವಾಗ ಮಾಡದೇ ಇರುವ ಸೇವೆಯನ್ನು ಸತ್ತ ನಂತರವೂ ಮಾಡಬಹುದು. ಅದಕ್ಕೆ ಇದೊಂದು ಮಾರ್ಗ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ 32 ಜನ ನೇತ್ರದಾನಕ್ಕೆ ಸಹಿ ಮಾಡಿದರು. ನೇತ್ರದಾನದ ಅಭಿಯಾನದಲ್ಲಿ ರೂಪಾ ಸಿಂಡ್ರೆ ನೇತ್ರದಾನಿಗಳ ನೊಂದಣಿ ಮಾಡಿಸಿದರು. ಪೂಜಾ ಗೌಡ ಸಂಗಡಿಗರು ಪ್ರಾರ್ಥಿಸಿದರು. ಎನ್.ಎಸ್.ಎಸ್ ಅಧಿಕಾರಿಗಳಾದ ರಾಘವೇಂದ್ರ ಅಂಕೋಲೆಕರ ಸ್ವಾಗತಿಸಿದರು. ಪ್ರವೀಣಾ ನಾಯಕ ವಂದಿಸಿದರು. ಡಾ. ಪುಷ್ಪ ನಾಯ್ಕ ಪರಿಚಯಿಸಿದರು. ಉಪನ್ಯಾಸಕ ಮಂಜುನಾಥ ಇಟಗಿ ನಿರೂಪಿಸಿದರು.