ಅಂಕೋಲಾ: ಇಲ್ಲಿನ ತೆಂಕಣಕೇರಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಡಿಜಿಟಲ್ ಸ್ಮಾರ್ಟ್ ಬೋರ್ಡ್‍ನ್ನು ಆಕಸ್ಮಿಕವಾಗಿ ನಿಧನರಾದ ಮಹೇಶ ನಾಯ್ಕ ಹಾಗೂ ಗೌತಮ ನಾಯ್ಕ ಸ್ಮರಣಾರ್ಥ ಗ್ರಾಮ ಪಂಚಾಯತ ಅಧ್ಯಕ್ಷೆ ಸೀಮಾ ಸುಧೀರ ನಾಯ್ಕ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ಮಹೇಶ ನಾಯ್ಕ ಹಾಗೂ ಗೌತಮ ನಾಯ್ಕ ಅವರು ನಿಧನರಾಗಿರುವುದು ನಮಗೆಲ್ಲ ಅತೀವ ದುಃಖ ತಂದಿದೆ. ಇವರು ಸಮಾಜದಲ್ಲಿ ತುಂಬ ಅನ್ಯೋನ್ಯವಾಗಿ ಬದುಕಿದ್ದರು. ಆದ್ದರಿಂದ ಅವರ ನೆನಪಿಗಾಗಿ ಡಿಜಿಟಲ್ ಸ್ಮಾರ್ಟ್ ಬೋರ್ಡನ್ನು ಅವರ ಕುಟುಂಬದವರು ನೀಡಿದ್ದಾರೆ ಎಂದು ಹೇಳಿದರು.
ಪತ್ರಕರ್ತ ವಿಠ್ಠಲದಾಸ ಕಾಮತ ಮಾತನಾಡಿ, ತೆಂಕಣಕೇರಿ ಶಾಲೆಯ ಹಳೆಯ ವಿದ್ಯಾರ್ಥಿ ರಾಜು ಮುಕುಂದ ನಾಯ್ಕ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಇಂಗ್ಲೀಷ್ ಕೊಠಡಿಗೆ ಬೇಕಾಗಿರುವ ಅನುಕೂಲಗಳನ್ನು ಕಲ್ಪಿಸಿಕೊಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯನ್ನು ಕೊಡುಗೆಯಾಗಿ ಸಮರ್ಪಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಜಯಂತ ಮಾಸ್ತರ, ರೇಖಾ ಆಗೇರ, ನಿವೃತ್ತ ಮುಖ್ಯಾಧ್ಯಾಪಕಿ ಸುಶೀಲಾ ಆಗೇರ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಘವೇಂದ್ರ ಗುನಗಾ, ಉಪಾಧ್ಯಕ್ಷೆ ಮುಕ್ತಾ ನಾಯ್ಕ, ನಿರ್ಮಲಾ ಬುಕ್‍ಸ್ಟಾಲ್ ಮಾಲಕ ರಾಜು ಮುಕುಂದ ನಾಯ್ಕ, ಶಿಕ್ಷಕಿ ಶೈಲಜಾ ಗುರವ, ರಾಜೇಶ ಮಿತ್ರಾ ನಾಯ್ಕ, ಶಿಕ್ಷಕ ಶಂಕರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ಪಾರ್ವತಿ ಗೋಪಾಲಕೃಷ್ಣ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ವನಿತಾ ಬಾಲಕೃಷ್ಣ ನಾಯಕ ಸ್ವಾಗತಿಸಿದರು. ಶಿಕ್ಷಕಿ ಯಾಸ್ಮೀನ್ ಶೇಖ್ ನಿರೂಪಿಸಿದರು.