ಅಂಕೋಲಾ: ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಕರ್ನಾಟಕ ಸಂಘ ಅಂಕೋಲಾ ಇದರ ಆಶ್ರಯದಲ್ಲಿ ಅಪರೂಪದ ಕಲಾ ಸಂಗಮದ ಯಕ್ಷಗಾನ, ನಾಟ್ಯ, ತಾಳಮದ್ದಲೆ ಕಾರ್ಯಕ್ರಮವನ್ನು ತಾಲೂಕ ದಂಡಾಧಿಕಾರಿ ಉದಯ ಕುಂಬಾರ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು.
ಕೊರೋನ ಮಹಾಮಾರಿಯ ಕಾರಣದಿಂದ ಕಮರಿ ಹೋಗಿರುವ ಕಲಾ ಪ್ರಕಾರಕ್ಕೆ ಮತ್ತೆ ಜೀವಕಳೆ ತುಂಬುವ ಮಹತ್ವಾಕಾಂಕ್ಷೆಯೊಂದಿಗೆ ಅಂಕೋಲಾ ಕರ್ನಾಟಕ ಸಂಘ ವಿನೂತನ ಕಾರ್ಯಕ್ರಮವನ್ನು ಸಂಘಟಿಸಿತ್ತು.
ಗಾನ ವೈಭವದಲ್ಲಿ ಸಾಲಿಗ್ರಾಮ ಮೇಳದ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರ, ಹೊನ್ನಾವರ ಮಾಳ್ಕೋಡದ ಚಿಂತನಾ ಹೆಗಡೆ ಸುಶ್ರಾವ್ಯ ಗಾಯನ ನಡೆಸಿದರು. ಮದ್ದಳೆಯ ಮಾಂತ್ರಿಕ ಶಂಕರ ಭಾಗವತ ಮತ್ತು ಪ್ರಸನ್ನ ಹೆಗ್ಗಾರ ಚಂಡೆ ವಾದನದಲ್ಲಿ ಪ್ರೇಕ್ಷಕರನ್ನು ಒಂದು ಗಂಟೆ ಕಾಲ ಮಂತ್ರಮುಗ್ದರನ್ನಾಗಿಸಿದರು.
ನಾಟ್ಯ ರಂಗದಲ್ಲಿ ಹನುಮಗಿರಿ ಮೇಳದ ರಕ್ಷಿತ ಶೆಟ್ಟಿ ಪಡ್ರೆ ಸ್ತ್ರೀವೇಷಧಾರಿಯಾಗಿ ಪುರುಷ ಪಾತ್ರದಲ್ಲಿ ಯಕ್ಷ ಅಭಿಜಾತೆ ಅಶ್ವಿನಿ ಕೊಂಡದಕುಳಿ ವಿಶೇಷ ರಸದೌತಣವನ್ನೇ ನೀಡಿದರು.
ವಿಶೇಷವಾಗಿ ಪೆÇ್ರ.ಕೆ.ವಿ.ನಾಯಕ ಮತ್ತು ರಾಜೇಶ ನಾಯಕ ಇವರಿಂದ ಪ್ರಸ್ತುತಪಡಿಸಿದ ತಾಳಮದ್ದಲೆ ಕಾರ್ಯಕ್ರಮ ತಾಳಮದ್ದಲೆಯ ಗತವೈಭವವನ್ನು ಮತ್ತೊಮ್ಮೆ ಸಾದರಪಡಿಸಿ ತಾಲೂಕಿನಲ್ಲಿ ಕಲೆ ಇನ್ನೂ ಜೀವಂತವಾಗಿ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ ಎಂಬುದನ್ನು ಸಾಬೀತುಪಡಿಸಿತು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರಭಾಕರ ಬಂಟ ಸ್ವಾಗತಿಸಿದರು. ಸಂಘಟಕ ರಾಜೇಶ ನಾಯಕ ನಿರೂಪಿಸಿದರು. ಉಪಾಧ್ಯಕ್ಷ ವಿಠಲದಾಸ ಕಾಮತ, ಸಹಕಾರ್ಯದರ್ಶಿ ಪ್ರಕಾಶ ಕುಂಜಿ, ಸದಸ್ಯರು ಉಪಸ್ಥಿತರಿದ್ದರು.