ಹೊನ್ನಾವರ: ಹೆಸರಿಗಷ್ಟೇ ಮೀನುಗಾರಿಕಾ ದಿನ ಆಚರಣೆ ಮಾಡಿ, ಮೀನುಗಾರಿಕೆ ಪ್ರದೇಶಗಳನ್ನು ವಿರೂಪಗೊಳಿಸಿ ಮೀನುಗಾರರ ಬದುಕು ಮೂರಾಬಟ್ಟೆ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಮೀನುಗಾರಿಕಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ್ ಕೊಚ್ರೇಕರ್ ಆರೋಪಿಸಿದ್ದಾರೆ.
ನವೆಂಬರ್ 21 ವಿಶ್ವ ಮೀನುಗಾರಿಕೆ ದಿನ. ಇತ್ತೀಚೆಗೆ ಅಭಿವೃದ್ಧಿಯ ನೆಪದಲ್ಲಿ ಕರ್ನಾಟಕದ ನೈಸರ್ಗಿಕ ಕರಾವಳಿ ತೀರ ಸೇರಿದಂತೆ ದೇಶದ ಕರಾವಳಿ ತೀರಗಳನ್ನು ಸಾಗರಮಾಲಾ ಮತ್ತು ವಾಣಿಜ್ಯ ಬಂದರುಗಳ ಹೆಸರಿನಲ್ಲಿ ವಿರೂಪಗೊಳಿಸುವ ಮತ್ತು ಭಂಡವಾಳ ಆಕರ್ಷಿಸುವ ನೆಪದಲ್ಲಿ ಕರಾವಳಿ ತೀರಗಳನ್ನು ಅನಗತ್ಯವಾಗಿ ಖಾಸಗಿಕರಣಗೊಳಿಸುವ, ಖಾಸಗಿಯವರಿಗೆ ಮಾರಾಟ ಮಾಡುವ, ದೀರ್ಘಾವಧಿಗೆ ಗುತ್ತಿಗೆಗೆ ನೀಡುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೀನುಗಾರಿಕೆ ವಿರೋಧಿ ನೀತಿಯನ್ನು ಖಂಡಿಸುವ ಖಂಡನಾ ನಿರ್ಣಯದ ಪ್ರಸ್ತಾವವೊಂದನ್ನು ರಾಷ್ಟ್ರೀಯ ಮೀನುಗಾರರ ಸಂಘಟನೆಯ ಕರ್ನಾಟಕ ಘಟಕ ಸ್ವೀಕರಿಸಿದೆ.
ರಾಜ್ಯದ ನೈಸರ್ಗಿಕ ಕರಾವಳಿ ತೀರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ರಾಷ್ಟ್ರೀಯ ನೀತಿಯೊಂದನ್ನ್ನು ಜಾರಿಗೆ ತರಬೇಕೆಂದು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕದ ಕರಾವಳಿಯ ಬಹುತೇಕ ಮೀನುಗಾರರ ಹಕ್ಕೊತ್ತಾಯವಾಗಿದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆದಿದ್ದಾರೆ.
ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೂಡಲೇ ಕೈಬಿಟ್ಟು ಸ್ಥಳೀಯ ಮೀನುಗಾರರ ಹಿತರಕ್ಷಣೆ ಮಾಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಅವರು ಆಗ್ರಹಿಸಿದ್ದಾರೆ.