ಹೊನ್ನಾವರ: ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಇತ್ತೀಚೆಗೆ ಕುಮಟಾ ಪುರಸಭೆಗೆ ಸ್ವಚ್ಛನಗರ ಪ್ರಶಸ್ತಿ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಉದಾಯರಾಜ ಮೇಸ್ತ ಕುಮಟಾಕ್ಕೆ ಯಾವ ಮಾನದಂಡದ ಮೇಲೆ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರಮಟ್ಟದ ಪ್ರಶಸ್ತಿಗೆ ನಮ್ಮ ಜಿಲ್ಲೆಯ ಒಂದು ತಾಲೂಕು ಆಯ್ಕೆಯಾಗಿರುವುದು ಸಂತಸ ಮತ್ತು ಹೆಮ್ಮೆಯ ವಿಷಯ. ಆದರೆ ಕುಮಟಾ ಪಟ್ಟಣಕ್ಕೆ ಈ ಪ್ರಶಸ್ತಿ ಯಾವ ಮಾನದಂಡದ ಮೂಲಕ ನೀಡಲಾಗಿದೆ ಎನ್ನುವುದು ಹೊನ್ನಾವರ ತಾಲೂಕಿನಲ್ಲಿ ಮೂಡಿರುವ ಪ್ರಶ್ನೆಯಾಗಿದೆ.
ಕುಮಟಾ ಪಟ್ಟಣಕ್ಕೆ ಒಂದು ತಾಜ್ಯ ವಿಲೇವಾರಿ ಘಟಕ ಇಲ್ಲದೇ ಅಲ್ಲಿನ ಕಸವನ್ನು ಹೊನ್ನಾವರ ಪಟ್ಟಣ ಪಂಚಾಯತ್‍ನ ತಾಜ್ಯ ವಿಲೇವಾರಿ ಘಟಕದಲ್ಲಿ ಕಸದ ರಾಶಿಯನ್ನು ತಂದು ಸುರಿಯುತ್ತಿದ್ದಾರೆ. ಹೀಗಿರುವಾಗ ಯಾವ ಮಾನದಂಡದ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ ಎಂದು ಉದಯರಾಜ ಮೇಸ್ತ ಪ್ರಶ್ನೆ ಮಾಡಿದ್ದಾರೆ.
ಕುಮಟಾ ತಾಜ್ಯವನ್ನು ಅಂದಿನ ಶಾಸಕಿ ಶಾರದಾ ಶೆಟ್ಟಿ ಹೊನ್ನಾವರ ತಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲು ಯೋಜನೆ ರೂಪಿಸಿದಾಗ ಕರವೇ ತಾಲೂಕಾ ಘಟಕ ವಿರೋಧಿಸಿತ್ತು. ಕುಮಟಾದಲ್ಲಿ ವಿಲೇವಾರಿ ಘಟಕ ಆಗುವವರೆಗೆ ಅವಕಾಶ ನೀಡಬೇಕೆಂದು ಶಾಸಕಿ ಕೇಳಿದಾಗ ಅವಕಾಶ ನೀಡಲಾಗಿತ್ತು. ಆದರೆ 5-6 ವರ್ಷ ಕಳೆದರೂ ಹೊನ್ನಾವರಕ್ಕೆ ಕಸ ಬರುವುದು ತಪ್ಪಲಿಲ್ಲ. ತನ್ನ ಮನೆ ಕಸವನ್ನು ಪಕ್ಕದ ಮನೆಗೆ ಸುರಿದು ತಾವು ಸ್ವಚ್ಛತೆಗೆ ಆದ್ಯತೆ ನೀಡುವವರು ಎನ್ನುವುದನ್ನು ಬಿಂಬಿಸಿಕೊಂಡಿದ್ದಾರೆ.
ಪ್ರಶಸ್ತಿ ಮಾನದಂಡದ ಆದಾರದ ಮೇಲೆ ನೀಡಲಾಗಿದೆಯೆ ಅಥವಾ ಕಾಣದ ಕೈಗಳ ಶಿಫಾರಸ್ಸಿನ ಆಧಾರದ ಮೇಲೆ ನೀಡಲಾಗಿದೆಯೇ ಎನ್ನುವ ಪ್ರಶ್ನೆಗಳು ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ. ಇನ್ನು ಮುಂದೆ ಕುಮಟಾ ತಾಜ್ಯ ಹೊನ್ನಾವರ ಘಟಕಕ್ಕೆ ಬಂದಲ್ಲಿ ಕಸದ ವಾಹನ ತಡೆದು ಪ್ರತಿಭಟಿಸುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.