ಅಂಕೋಲಾ: ಕೇಂದ್ರ ಸರ್ಕಾರ ಈ ಹಿಂದೆ ಜಾರಿಗೆ ತಂದ ಕೃಷಿ ಕಾಯ್ದೆಯನ್ನು ವಾಪಸ್ ಪಡೆದಿದ್ದರ ಕಾರಣ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಅಂಕೋಲಾದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ಒಂದು ವರ್ಷದಿಂದ ದೆಹಲಿಯಲ್ಲಿ ರೈತರು ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಈಗ ದೇಶ ವಿರೋಧಿ ಮತ್ತು ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನು ಪ್ರಧಾನಿಗಳು ವಾಪಸ್ಸು ಪಡೆದಿರುವದು ರೈತ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ ಎಂದರು. ಜೊತೆಗೆ ಈ ಹೋರಾಟದಲ್ಲಿ ಹುತಾತ್ಮರಾದ ರೈತರ ಕುಟುಂಬಕ್ಕೆ 10ಲಕ್ಷ ರೂ. ಪರಿಹಾರ ನೀಡಬೇಕೆಂದು, ವಿದ್ಯುತ್ ಕಾಯ್ದೆ ವಾಪಸ್ಸು ಪಡೆಯಬೇಕು, ಹಾಗೆಯೇ ರಾಜ್ಯದ ಭೂ ತಿದ್ದುಪಡಿ ಕಾನೂನು, ಎಪಿಎಮ್‍ಸಿ ತಿದ್ದುಪಡಿ ಕಾನೂನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ವಿಷ್ಣು ನಾಯ್ಕ, ರಾಮಕೃಷ್ಣ ಗುಂದಿ, ಮಹಾಂತೇಶ ರೇವಡಿ, ಗೋಪಾಲಕೃಷ್ಣ ನಾಯಕ ವಾಸರೆ, ಸಂಘಟನೆಗಳ ಮುಖಂಡರುಗಳಾದ ಗೌರೀಶ ನಾಯಕ, ಸಂತೋಷ ನಾಯ್ಕ, ಉದಯ ನಾಯ್ಕ, ನಾಗೇಶ ಗೌಡ, ಮೀನಾಕ್ಷಿ ನಾಯಕ, ರಾಜು ಗೌಡ, ಸುಮತಿ ಗೌಡ, ಗಣೇಶ ಪಟಗಾರ, ಪ್ರದೀಪ ನಾಯಕ, ಬಾಲಚಂದ್ರ ನಾಯಕ, ಮುಂತಾದವರು ಭಾಗವಹಿಸಿದ್ದರು.