ಶಿರಸಿ: ರಾಷ್ಟ್ರ ಪ್ರೇಮ ಎಂಥದ್ದು ಎಂದರೆ ಹೊರ ದೇಶದಲ್ಲಿ ಉನ್ನತ ವ್ಯಾಸಂಗ ಮುಗಿಸಿ ಅಲ್ಲಿಯೇ ಐಶಾರಾಮಿ ಜೀವನ ನಡೆಸುವ ಅವಕಾಶವಿದ್ದರೂ ಕೂಡಾ ಅದನ್ನೆಲ್ಲ ಬದಿಗೊತ್ತಿ ದೇಶ ಸೇವೆ ಮಾಡಬೇಕೆಂಬ ಹಂಬಲದಿಂದ ಮರಳಿ ತಾಯ್ನಾಡಿಗೆ ಬಂದ ಶಿರಸಿಯ ಕೇವಲ್ ಹೆಗಡೆ ಸತತ ಪರಿಶ್ರಮ, ಪಟ್ಟುಬಿಡದ ಪ್ರಯತ್ನಗಳಿಂದ ಸಂಬಂಧಿತ ಕಠಿಣ ಪರೀಕ್ಷೆಗಳಿಗೆ ತಮ್ಮನ್ನು ಒಡ್ಡಿಕೊಂಡು ಶಾರ್ಟ್ ಸರ್ವೀಸ್ ಕಮೀಷನ್ ಮೂಲಕ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಿವೃತ್ತ ಜಿಯೊಲೊಜಿಸ್ಟ್ ಜಿ.ವಿ ಹೆಗಡೆ ಹಾಗೂ ಶಿರಸಿಯ ಎಂಇಎಸ್ ಎಂ ಎಂ. ಕಲಾ -ವಿಜ್ಞಾನ ಕಾಲೇಜಿನ ಪ್ರಸ್ತುತ ಪ್ರಾಚಾರ್ಯೆ ಕೋಮಲಾ ಭಟ್ ಅವರ ಪುತ್ರ ಕೇವಲ್ ಹೆಗಡೆ. ಲಯನ್ಸ್ ಮತ್ತು ಡಾನ್ ಬೊಸ್ಕೋ ಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದು ನಂತರ ಮಂಗಳೂರಿನಲ್ಲಿ ಪಿಯುಸಿ ಮುಗಿಸಿ ಬೆಂಗಳೂರು ಅಂಬೇಡ್ಕರ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದವರು. ನಂತರ ಲಂಡನ್‍ನಲ್ಲಿ ಎಂ ಎಸ್ ಪದವಿ ಪಡೆದು ಮರಳಿದ್ದರು. ಚಿಕ್ಕಂದಿನಿಂದಲೂ ದೇಶಪ್ರೇಮ, ರಾಷ್ಟ್ರ ಮೊದಲು ಎಂಬ ಭಾವನೆ; ಕಲೆ, ಸಾಹಿತ್ಯ, ಸಂಗೀತ ಮತ್ತು ಕ್ರೀಡೆಯಲ್ಲಿ ಅಪಾರ ಅಭಿರುಚಿಯೊಂದಿಗೆ ಬೆಳೆದವರು. ಸೃಜನಾತ್ಮಕ ಚಟುವಟಿಕೆಗಳನ್ನು ಉಪೇಕ್ಷಿಸಿ ಮೊಬೈಲ್ ಗೀಳಿಗೆ ಬಿಳುವುದೋ, ವ್ಯಸನಗಳನ್ನು ಅಂಟಿಸಿಕೊಂಡು ಅಂಡಲೆಯುವುದೋ ಕಂಡುಬರುವ ಇಂದಿನ ಸಾಮಾನ್ಯ ಚಿತ್ರಣದ ನಡುವೆ ಕೇವಲ್ ಚಿತ್ರಕಲೆ, ಗಿಟಾರ್ ಕಲಿಕೆ, ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡು, ತನ್ನೊಳಗಿನ ಕವಿತ್ವವನ್ನೂ ಕವನಗಳ ರೂಪದಲ್ಲಿ ಅಭಿವ್ಯಕ್ತಿಸುತ್ತ, ಓದಿನಲ್ಲೂ ಶ್ರದ್ಧೆ, ಸಾಧನೆ ತೋರುತ್ತ ಒಂದು ನಿರ್ದಿಷ್ಟ ಗುರಿಯಿಟ್ಟುಕೊಂಡು ಅದಕ್ಕಾಗಿ ಶಾರೀರಿಕ ಕಸರತ್ತು, ಕಠಿಣ ತಪಸ್ಸು ನಡೆಸಿ ಸೇನೆಯ ಹುದ್ದೆಗೇರಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ಶಿಕ್ಷಣ ಹಾಗೂ ವಿಜ್ಞಾನ ವಲಯದ ನೌಕರಿಯಲ್ಲಿ ಗುರುತಿಸಿಕೊಂಡವರ ಮಕ್ಕಳು ಸಾಮಾನ್ಯವಾಗಿ ತಂದೆ-ತಾಯಿಯ ಅದೇ ಹಾದಿಯಲ್ಲಿ ಅಥವಾ ಎಂಜಿನೀಯರಿಂಗ್, ಚಾರ್ಟರ್ಡ್ ಎಕೌಂಟಿಂಗ್, ಬ್ಯಾಂಕಿಂಗ್ ಇಲ್ಲವೇ ವಿಜ್ಞಾನ -ತಂತ್ರಜ್ಞಾನದ ಮಾರ್ಗ ಆಯ್ದುಕೊಂಡು ವಿದ್ಯಾರ್ಜನೆ ಮಾಡಿ ಅದರಲ್ಲೇ ವೃತ್ತಿಬದುಕು ಕಟ್ಟಿಕೊಳ್ಳುತ್ತಾರೆ. ಆದರೆ ಕೇವಲ್ ಹೆಗಡೆ ಸ್ವಲ್ಪ ಭಿನ್ನವಾಗಿ ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಎಂಜಿನೀಯರಿಂಗ್ ಪೂರೈಸಿ, ಲಂಡನ್‍ನಲ್ಲಿ ಎಂ ಎಸ್ ಪದವಿ ಪಡೆದು, ಸಾಕಷ್ಟು ಅವಕಾಶಗಳಿದ್ದರೂ ಲಂಡನ್ನಿನ ಸೆಕೆಂಡ್ ಸಿಟಿಜನ್ ಆಗಬಯಸದೆ ಭಾರತ ಮಾತೆಯ ಸೇವೆ ಮಾಡಬೇಕೆಂಬ ಕನಸನ್ನು ಹೊತ್ತು ಅದನ್ನು ಸಾಧಿಸಿದ್ದಾನೆ.
ಕೇವಲ 24 ರ ಹರೆಯದಲ್ಲಿ, ಕವಾಯತು ಮತ್ತು ಓಲಗ (ಪರೇಡ್ ಮತ್ತು ಪೈಪಿಂಗ್ ಸೆರೆಮನಿ ಸಮಾರಂಭದಲ್ಲಿ ಉತ್ತೀರ್ಣಗೊಂಡು ಎರಡು ನಕ್ಷತ್ರಗಳನ್ನು ಹೆಗಲಿಗೇರಿಸಿಕೊಳ್ಳುವ ಮೂಲಕ ಆರ್ಮಿ ಆಫೀಸರ್ ಹುದ್ದೆಗೇರಿ ಬೆಟಾಲಿಯನ್‍ನ ಮುಂಚೂಣಿಯಲ್ಲಿದ್ದು ಲೀಡ್ ಮಾಡುತ್ತಿರುವುದು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ.