ಹಳಿಯಾಳ: ರಾಜ್ಯದಲ್ಲಿ ಪ್ರಕೃತಿ ವೈಪರೀತ್ಯದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ರೈತರು ತತ್ತರಿಸಿದ್ದು, ಕಟಾವಿಗೆ ಬಂದ ಫಸಲು ಕಣ್ಣಮುಂದೆಯೇ ಹಾಳಾಗುತ್ತಿದ್ದರೂ ಏನೂ ಮಾಡದ ಅಸಹಾಯಕ ಸ್ಥಿತಿಗೆ ತಲುಪಿರುವುದು ಅತಿದೊಡ್ಡ ದುರಂತವಾಗಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗುತ್ತಿರುವುದರಿಂದ ರೈತರಿಗೆ ತಾವು ಬೆಳೆದ ಭತ್ತ, ಗೋವಿನಜೋಳ ಹಾಗೂ ಇತರ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅದರಲ್ಲಿಯೂ ಮುಖ್ಯವಾಗಿ ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಮುಖ್ಯವಾಗಿ ಕೊಯ್ಯೋತ್ತರ ಭತ್ತದ ಬೆಳೆಯು ನೀರಿನಲ್ಲಿ ಮುಳುಗಿದ್ದಲ್ಲದೇ, ಹಲವಾರು ಕಡೆಗಳಲ್ಲಿ ಕಟಾವು ಮಾಡಿದ ಭತ್ತ ಕೊಚ್ಚಿ-ಕೊಂಡು ಹೋಗಿದೆ. ಇನ್ನು ಕೆಲವು ಭಾಗಗಳಲ್ಲಿ ಕೊಯ್ತ ಮಾಡದೇ ಇದ್ದಭತ್ತ, ಗೋವಿನ ಜೋಳ ಹಾಗೂ ಬಾಳೆ, ಅಡಿಕೆ ಮುಂತಾದ ತೋಟಗಾರಿಕಾ ಬೆಳೆಗಳು ಸಹ ಹಾಳಾಗಿದ್ದು, ರೈತರಿಗೆ ಬಹಳಷ್ಟು ನಷ್ಟವಾಗಿರುತ್ತದೆ. ಪ್ರಕೃತಿ ವಿಪತ್ತು ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಒದಗಿಸಲು ಅನುಕೂಲವಾಗುವಂತೆ ಕೂಡಲೇ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿ, ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಧಾವಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ವಿಶೇಷವಾಗಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ನೋಂದಾವಣೆಯಾದ ರೈತರಿಗೆ ನೆರವು ಒದಗಿಸುವಾಗ ವಿಮಾ ಕಂಪನಿಗಳು ಪುಡಿಗಾಸಿನ ಪರಿಹಾರ ನೀಡದೇ, ಮಾರುಕಟ್ಟೆಯ ದರದಲ್ಲಿ ಯೋಗ್ಯ ಪರಿಹಾರವನ್ನು ನೀಡುವಂತೆ ಸೂಚಿಸಬೇಕಾಗಿದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಕಾಲಿಕ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳ ಸಮೀಕ್ಷೆಯನ್ನು ಸಮರೋಪಾದಿಯಲ್ಲಿ ಕೈಗೊಂಡು ರೈತರ, ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಬೆಳೆ ನಷ್ಟ ಪರಿಹಾರವನ್ನು ಶೀಘ್ರದಲ್ಲಿ ನೀಡುವಂತೆ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಆರ್ವಿಡಿ ಪತ್ರ ಬರೆದಿದ್ದಾರೆ.