ಶಿರಸಿ: ಕಳೆದ ಮೂರ್ನಾಲ್ಕು ದಿನಗಳಿಂದ ಬನವಾಸಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಸಂಪೂರ್ಣ ಬೆಳೆ ಹಾನಿಯಾಗಿದೆ. ಈ ಭಾಗದಲ್ಲಿ ಭತ್ತ ಸೇರಿದಂತೆ ಇನ್ನಿತರ ಬೆಳೆ ಹಾನಿಯಾಗಿ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಕಾಳಂಗಿ ಸೇವಾ ಸಹಕಾರಿ ಸಂಘ ದಾಸನಕೊಪ್ಪದ ಅಧ್ಯಕ್ಷ ದ್ಯಾಮಣ್ಣ ಜಿ ದೊಡ್ಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭತ್ತದ ಕೊಯ್ಲು ಮಾಡಿ ಗದ್ದೆಯಲ್ಲಿ ಒಣ ಹಾಕಿದ್ದ ಭತ್ತ ನೀರಿನಲ್ಲಿ ಮುಳುಗಿ ಮೊಳಕೆ ಬರಲಾರಂಭಿಸಿದೆ. ಭತ್ತದ ಜೊತೆ ಹುಲ್ಲು ಕೂಡಾ ಹಾಳಾಗಿದೆ. ಭತ್ತದ ಜೊತೆ ಗೋವಿನಜೋಳ, ಅಡಿಕೆ, ಅನಾನಸ್ ಸೇರಿದಂತೆ ಶುಂಠಿ ಬೆಳೆಗಳಲ್ಲಿ ನೀರು ನಿಂತು ಬೆಳೆ ಕೊಳೆಯಲಾರಂಭಿಸಿದೆ. ಕೋವಿಡ್‍ನಿಂದ ತತ್ತರಿಸಿದ್ದ ರೈತ ಸಮುದಾಯ ಅಕಾಲಿಕ ಮಳೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಂದ ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಿ ರೈತರಲ್ಲಿ ಆತ್ಮಸ್ಥೆರ್ಯ ಹಾಗೂ ಧೈರ್ಯವನ್ನು ತುಂಬುವ ಕೆಲಸ ಸರ್ಕಾರ ಮಾಡಬೇಕೆಂದು ಆಗ್ರಹಿಸಿದ್ದಾರೆ.