ದಾಂಡೇಲಿ: ಮಾನವೀಯ ಕಾರ್ಯವಾದ ನೇತ್ರದಾನ, ದೇಹದಾನ, ರಕ್ತದಾನದಂತಹ ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ನಮ್ಮಿಂದಾದ ಅಲ್ಪ ಸೇವೆ ಸಲ್ಲಿಸಿ ಮಾದರಿ ಆಗುವುದೇ ನಿಜವಾದ ಗಟ್ಟಿತನ ಎಂದು ದಾಂಡೇಲಿಯ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ರೇಣುಕಾ ಬಂದಂ ಅಭಿಪ್ರಾಯಪಟ್ಟರು.
ಇಂದಿರಾ ಗಾಂಧಿಯವರ 104ನೇ ಜನ್ಮದಿನಾಚರಣೆ ಪ್ರಯುಕ್ತ ರಾಜ್ಯ ಮಹಿಳಾ ಕಾಂಗ್ರೆಸ್‍ನಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ನೇತ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಮರಣಾನಂತರ ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿರುವುದಾಗಿ ತಿಳಿಸಿದರು. ವೇದಿಕೆಯ ಮೇಲೆ ನಿಂತು ಸಮಾಜಕ್ಕೆ ಮಾದರಿಯಾಗಬೇಕೆಂದು ಉಪದೇಶ ನೀಡುವುದು ಬಹಳ ಸುಲಭದ ಕೆಲಸ, ಆದರೆ ನಾವೇ ಸ್ವತಃ ನೇತ್ರದಾನ, ದೇಹದಾನ, ರಕ್ತದಾನದಂತಹ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ನಮ್ಮಿಂದಾದ ಅಲ್ಪ ಸೇವೆ ಸಲ್ಲಿಸಿ ಮಾದರಿ ಆಗುವುದೇ ನಿಜವಾದ ಗಟ್ಟಿತನವಾಗಿದೆ.
ಮರಣಾನಂತರ ನಮ್ಮ ದೇಹ ಸುಟ್ಟು ಬೂದಿ ಆಗುವುದಕ್ಕಿಂತ ಇನ್ನೊಬ್ಬರಿಗೆ ಕಿಂಚಿತ್ತಾದರೂ ಪ್ರಯೋಜನ ಆಗಲಿ ಎಂದು ನೇತ್ರದಾನಕ್ಕೆ ನೊಂದಣಿ ಮಾಡಿಸಿದ್ದೇನೆ. ಮರಣಾನಂತರ ನಮ್ಮ ಕಣ್ಣುಗಳು ಇನ್ನೊಬ್ಬರಿಗೆ ದೃಷ್ಟಿ ನೀಡುತ್ತವೆ ಎಂದಾದರೆ ಅದಕ್ಕಿಂತ ದೊಡ್ಡ ಆತ್ಮ ಸಂತೃಪ್ತಿ ಬೆರೊಂದಿಲ್ಲ. ಸಮಾಜ ಸೇವೆ ಮಾಡಲು ಹಣ, ಅಧಿಕಾರ, ಆಸ್ತಿ, ಅಂತಸ್ತು ಇರಬೇಕೆಂದೇನೂ ನಿಯಮವಿಲ್ಲ. ಮನಸ್ಸಿರಬೇಕಷ್ಟೇ. ಮಾದರಿಯಾಗುವ ಮನಸ್ಸಿದ್ದರೆ ಯಾವುದಾದರೂ ರೀತಿಯಲ್ಲಿ ನಾವು ಸಮಾಜಕ್ಕೆ ಕೊಡುಗೆ ಕೊಡಬಹುದು ಎಂದು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ರೇಣುಕಾ ಬಂದಂ ತಿಳಿಸಿದ್ದಾರೆ.
ದಾಂಡೇಲಿಯಲ್ಲಿ ನೇತ್ರದಾನ ಶಿಬಿರ: ದಾಂಡೇಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನೇತ್ರದಾನ ಶಿಬಿರವನ್ನು ಶೀಘ್ರದಲ್ಲೇ ಸ್ಥಳಿಯವಾಗಿ ಹಮ್ಮಿಕೊಳ್ಳಲಾಗುವುದು. ತಮ್ಮನ್ನು ತಾವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಇನ್ನಿತರರಿಗೆ ಮಾದರಿಯಾಗಬೇಕೆನ್ನುವ ಉತ್ಕಟ ಬಯಕೆ ಉಳ್ಳವರು, ತಮ್ಮ ಕುಟುಂಬಸ್ಥರ ಅನುಮತಿ ಪಡೆದು ಮರಣಾನಂತರದ ನೇತ್ರದಾನದ ಕಾರ್ಯಕ್ಕೆ ನೊಂದಣಿ ಮಾಡಿಸಬೇಕಾಗುತ್ತದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಂಡು ನೇತ್ರದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ರೇಣುಕಾ ಬಂದಂ ತಿಳಿಸಿದ್ದಾರೆ.