ಅಂಕೋಲಾ: ಬಂಗಾಳಕೊಲ್ಲಿಯಲ್ಲಿ ವಾಯುಆಭಾರ ಕುಸಿತದ ಪರಿಣಾಮ ಸುರಿಯುತ್ತಿರುವ ಅಕಾಲಿಕ ಮಳೆಗೆ ಬೆಳೆಗಳೆಲ್ಲ ಹಾನಿಯಾಗಿದ್ದು, ಶನಿವಾರ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಟೊಮೆಟೊ ದರ ಶತಕ ಬಾರಿಸಿ ಗ್ರಾಹಕರಿಗೆ ಶಾಕ್ ನೀಡಿತ್ತು.
ಈ ಭಾಗಕ್ಕೆ ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳಿಂದ ತರಕಾರಿ ಆಮದಾಗುತ್ತಿದ್ದು, ಈಬಾಗದಲ್ಲಿ ಕೂಡಾ ಅಕಾಲಿಕ ಮಳೆಯಿಂದ ಕೃಷಿ ಬೆಳೆ ಮಳೆಗೆ ಆಹುತಿಯಾಗಿದೆ. ಆದ್ದರಿಂದ ಟೊಮೆಟೋ ಮಾತ್ರವಲ್ಲ, ಇತರ ತರಕಾರಿ ಬೆಲೆಯೂ ಗಗನಕ್ಕೇರಿದೆ. 20 ರಿಂದ 30 ರೂ.ಗೆ ಮಾರಾಟವಾಗುತ್ತಿದ್ದ ತರಕಾರಿ 60 ರಿಂದ 80 ರೂ.ಗೆ ಮಾರಾಟವಾಗುತ್ತಿದೆ.
ವ್ಯಾಪಕ ಮಳೆಯಾಗುತ್ತಿದ್ದರಿಂದ ಟೊಮೆಟೊ, ಈರುಳ್ಳಿ, ಬದನೆ, ಎಲೆಕೋಸು ಮುಂತಾದ ತರಕಾರಿಗಳು ಕೊಳೆತು ಹೋಗುತ್ತಿವೆ. ಪೆಟ್ರೋಲ, ಡೀಸಲ್ ಬೆಲೆ ಹೆಚ್ಚಳದಿಂದ ದಿನಸಿ ಮತ್ತು ಇತರೆ ಕೃಷಿ ಉತ್ಪನ್ನಗಳ ಬೆಲೆ ಈಗಾಗಲೇ ಗಗನಕ್ಕೇರಿದ್ದು ಅಕಾಲಿಕ ಮಳೆಯಿಂದ ಬೆಳೆ ಹಾಳಾಗಿ ರೈತರೂ ಕೂಡ ಕಂಗಾಲಾಗಿದ್ದಾರೆ.