ಅಂಕೋಲಾ: ಬೇಳಾ ಬಂದರಿನ ರಸ್ತೆಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಪುರಸಭೆಯವರು ಸ್ವಚ್ಛ ಮಾಡದ ಕಾರಣ ಸ್ಥಳೀಯರೇ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.
ಈ ರಸ್ತೆಯ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದು ಪ್ರತಿನಿತ್ಯ ಈ ರಸ್ತೆಯಲ್ಲಿ ಓಡಾಡುವ ಶಾಲಾ ಮಕ್ಕಳು, ಗ್ರಾಮಸ್ಥರಿಗೆ ತೊಂದರೆಯಾಗುತ್ತದೆಂದು ನ್ಯಾಯವಾದಿ ಉಮೇಶ ನಾಯ್ಕ ಮತ್ತಿತರರು ಪುರಸಭೆಯ ಅಧ್ಯಕ್ಷರ ಬಳಿ ಮನವಿ ಸಲ್ಲಿಸಿದ್ದರು. ಆದರೆ ಪುರಸಭೆಯವರು ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದ ಕಾರಣ ಸ್ಥಳೀಯರೇ ಜೊತೆಗೂಡಿ ತಮ್ಮ ಸ್ವಂತ ಖರ್ಚಿನಿಂದ ಸ್ವಚ್ಛತಾ ಕಾರ್ಯ ಕೈಗೊಂಡು ಬೆಳೆದು ನಿಂತ ಗಿಡಗಂಟಿಗಳನ್ನು ತೆರವುಗೊಳಿಸಿದರು.
ಈ ಕಾರ್ಯದಲ್ಲಿ ನ್ಯಾಯವಾದಿ ಉಮೇಶ ನಾಯ್ಕ, ಮಂಜುನಾಥ ದತ್ತಾ ನಾಯ್ಕ, ಉದಯ ಎನ್. ನಾಯ್ಕ, ಗ್ರಾ.ಪಂ ಸದಸ್ಯ ರವಿ ನಾಯ್ಕ, ಮೋಹನ ಬಿ. ನಾಯ್ಕ ಇನ್ನಿತರರು ಹಾಜರಿದ್ದರು.