ಶಿರಸಿ: ಹುಳಗೋಳ ಸೇವಾ ಸಹಕಾರಿ ಸಂಘದ 102 ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ನ.20 ರಂದು ನೆರವೇರಿಸಲಾಯಿತು. ಅಲ್ಲದೇ ಇದೇ ಸಂದರ್ಭದಲ್ಲಿ 68 ನೇ ಸಹಕಾರ ಸಪ್ತಾಹವನ್ನೂ ಸಹ ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ ಮಾಡುವ ಮೂಲಕ ಆಚರಿಸಲಾಯಿತು.
ಸಂಘವು ವರದಿ ವರ್ಷಾಂತ್ಯಕ್ಕೆ ಸಂಘವು ರೂ 66.50 ಲಕ್ಷ ಲಾಭ ಗಳಿಸಿದ್ದು, ಶೇ 15 ರ ಡಿವಿಡೆಂಡ ನೀಡಲು ಸಂಘದ ವಾರ್ಷಿಕ ಸಭೆಯಲ್ಲಿ ನಿರ್ಧರಿಸಲಾಯಿತು. ಸಂಘವು 922 ಸದಸ್ಯರನ್ನು ಹೊಂದಿದ್ದು ದುಡಿಯುವ ಬಂಡವಾಳ ರೂ 57.28 ಕೋಟಿ ಆಗಿರುತ್ತದೆ. ಸಂಘದ ಶೇರು ಬಂಡವಾಳ ರೂ 50.07 ಲಕ್ಷಗಳ ಶೇರು ಹೊಂದಿದ್ದು ಅಲ್ಲದೇ ರೂ 741.85 ಲಕ್ಷ ಸ್ವಂತ ಬಂಡವಾಳ ಹೊಂದಿದೆ.
ಸಂಘದ ಠೇವು ಸಂಗ್ರಹಣೆಯಲ್ಲಿ ಶೇ 19.54, ಮತ್ತು ಸಾಲ ನೀಡಿಕೆಯಲ್ಲಿ ಶೇ 4.66 ರಷ್ಟು ಪ್ರಗತಿ ಸಾಧಿಸಲಾಗಿದೆ. ರೂ 46.71 ಕೋಟಿ ಠೇವಣಿ ಹೊಂದಿದ್ದು ವಿತರಿಸಿದ ಸಾಲಬಾಕಿ ರೂ 39.72 ಕೋಟಿ ಗಳು ಇದ್ದು ಸಂಘದ ವಸೂಲಿ ಪ್ರಮಾಣ ಶೇ 98.31 ರಷ್ಟಾಗಿದೆ. ವರದಿ ಸಾಲಿನಲ್ಲಿ 647.96 ಲಕ್ಷ ಗ್ರಾಹಕ ವಸ್ತುಗಳನ್ನು ಮಾರಾಟ ಮಾಡಿದ್ದು ಸದಸ್ಯರಿಗೆ ಇವುಗಳ ಮೇಲೆ ರೂ 9.83 ಲಕ್ಷ ರಿಬೇಟ ನೀಡಲು ನಿರ್ಧರಿಸಲಾಗಿದೆ. ಪತ್ತು ಮಾರಾಟ ಜೋಡಣೆಯಲ್ಲಿ ವರದಿ ಸಾಲಿನಲ್ಲಿ ಸದಸ್ಯರ 15015.18 ಕ್ವಿಂಟಾಲ್ ಮಹಸೂಲನ್ನು ಸಂಘದ ಮುಖಾಂತರ ವಿಕ್ರಿ ಮಾಡಲಾಗಿದ್ದು ಇದರಿಂದ ರೂ 3469.04 ಲಕ್ಷಗಳ ಹಣ ಸದಸ್ಯರ ಖಾತೆಗಳಿಗೆ ಜಮಾ ಮಾಡಲಾಗಿದೆ.
ಸಭೆಯ ನಂತರದಲ್ಲಿ 68 ನೇ ಸಹಕಾರಿ ಸಪ್ತಾಹದ ಅಂಗವಾಗಿ ಸಂಘದ ಹಿರಿಯ ಸದಸ್ಯ ಚಂದ್ರಶೇಖರ ಸುಬ್ಬಾ ಭಟ್ಟ ಗಡಿಗೆಹೊಳೆ, ರಾಮಚಂದ್ರ ವೆಂಕಟ್ರಮಣ ಹೆಗಡೆ ಅರಸಾಪುರ, ಮಾರ್ಯ ಯಂಕ ನಾಯ್ಕ ಬೆಳಲೆ, ತಿಮ್ಮಾ ದೇವು ಗೌಡ ಮಲೇನಳ್ಳಿ, ತಾರಾ ಮಹಾದೇವ ಶೆಟ್ಟಿ ಮಾತ್ನಳ್ಳಿ ಇವರುಗಳನ್ನು ಸನ್ಮಾನಿಸಲಾಯಿತು. ಅಲ್ಲದೇ ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಯಕ್ಷಗಾನ ಕಲಾವಿದ ಗೋಪಾಲಾಚಾರ್ಯ ತೀರ್ಥಳ್ಳಿ ಇವರಿಗೂ ಸಂಘದ ಸರ್ವ ಸದಸ್ಯರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ವಿ. ಎಸ್. ಹೆಗಡೆ ಕೆಶಿನ್ಮನೆ ಇವರು ಸಂಘವು ಈ ಸಾಲಿನಲ್ಲಿ ದೋಟಿ ಮೂಲಕ ಮದ್ದು ಸಿಂಪರಣೆ ಕಾರ್ಯ ಕೈಗೊಂಡಿದ್ದು, ರೈತರಿಗಾಗಿ ಸಪ್ಪು ಕೊಚ್ಚುವ ಯಂತ್ರ, ಹುಲ್ಲು ಕಟ್ಟುವ ಯಂತ್ರವನ್ನು ಖರೀದಿಸಿದೆ. ಮುಂದಿನ ದಿನಗಳಲ್ಲಿ ಕಬ್ಬಿಣ, ತಗಡು ಮಾರಾಟ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದರು.
ಟಿಎಂಎಸ್ ಶಿರಸಿ ಇದರ ಅಧ್ಯಕ್ಷರೂ ಸಂಘದ ನಿರ್ದೆಶಕರೂ ಆದ ಜಿ ಎಂ ಹೆಗಡೆ ಹುಳಗೋಳ ಇವರು ಮಾತನಾಡಿ ಸಂಘದ ಠೇವು ಸಂಗ್ರಹಣೆ ಹೆಚ್ಚಿದ್ದು ಬಂಡವಾಳವನ್ನು ದುಡಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಸಂಘವೇ ಮೊದಲಾಗಿ ಪ್ರಾರಂಭಿಸಿದ ಕಡ್ಡಾಯ ಠೇವಣಿ ಯೋಜನೆ ಸದಸ್ಯರನ್ನು ಆರ್ಥಿಕವಾಗಿ ಸದೃಢಗೊಳಿಸಿದೆ ಎಂದರು.
ಸಭಾ ಕಾರ್ಯಕ್ರಮವನ್ನು ಸಂಘದ ಮುಖ್ಯ ಕಾರ್ಯನಿರ್ವಾಹಕ ಗಣಪತಿ ಎಂ ಹೆಗಡೆ ಮಾತ್ನಳ್ಳಿ ಮತ್ತು ಸನ್ಮಾನ ಕಾರ್ಯಕ್ರಮವನ್ನು ಸಂಘದ ನಿರ್ದೇಶಕರಾದ ನಾಗರಾಜ ಭಟ್ಟ ಬೊಮ್ನಳ್ಳಿ ಮತ್ತು ಶಶಿಕಾಂತೆ ಹೆಗಡೆ ತಾರಗೋಡ ನಿರ್ವಹಿಸಿದರು. ಸಂಘದ ಉಪಾಧ್ಯಕ್ಷ ಆರ್ ಎಸ್ ಭಟ್ಟ ನಿಡಗೋಡ ಇವರು ಎಲ್ಲರಿಗೂ ವಂದಿಸಿದರು. ಸಭೆಯ ನಂತರದಲ್ಲಿ ಅಭಿನೇತ್ರಿ ಆರ್ಟ ಟ್ರಸ್ಟ ನೀಲ್ಕೋಡ ಮತ್ತು ಸಹ ಕಲಾವಿದರಿಂದ ಚಕ್ರ ಚಂಡಿಕೆ ಎಂಬ ಆಖ್ಯಾನವನ್ನು ಪ್ರದರ್ಶಿಸಲಾಯಿತು.