ಶಿರಸಿ: ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಜಗದೀಶ ವಿ ಯಾಜಿ ಅವರಿಗೆ ‘ಆಯುರ್ವೇದ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿವಿಯಲ್ಲಿ ನ. 18 ರಂದು ನಡೆದ 6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಆಯುರ್ವೇದ ಚಿಕಿತ್ಸಾಕ್ರಮದಲ್ಲಿ ರೋಗಿ ಹಾಗೂ ರೋಗದ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿದಲ್ಲಿ ಎಂತಹಾ ರೊಗವನ್ನಾದರೂ ಗುಣ ಪಡಿಸಬಹುದು ಎಂದು ಹೇಳಿದರು. ಆಯುಷ್ ಇಲಾಖೆ ಕಾಲಕಾಲಕ್ಕೆ ಅಗತ್ಯ ಸೌಲಭ್ಯ ಒದಗಿಸುವ ಮೂಲಕ ಚಿಕಿತ್ಸೆಗೆ ಸದಾ ಬೆಂಬಲ ನೀಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಉಡುಪಿ ಆಯುರ್ವೇದ ಕೆಂದ್ರ ವೈದ್ಯ ಡಾ. ರಾಘವೇಂದ್ರ ಆಚಾರ್ಯ ಅವರಿಗೂ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ನೀಡಿ ಗೌರವಿಸಿದರು. ನಂತರ ಮಾತನಾಡಿದ ಅವರು, ಯೋಗ ಮತ್ತು ಆಯುರ್ವೇದ ಭಾರತದ ಹೆಮ್ಮೆ. ಇದು ಇಂದು ವಿಶ್ವಮಟ್ಟಕ್ಕೆ ಹರಡುತ್ತಿರುವುದು ಸಂತೋಷದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ, ಮೈಸೂರು ಆಯುರ್ವೇದ ವಿವಿ ಪ್ರಾಚಾರ್ಯ ಗಜಾನನ ಹೆಗಡೆ, ರಾಜೀವಗಾಂಧಿ ಆರೋಗ್ಯ ಕೇಂದ್ರದ ಕುಲಪತಿ ಡಾ. ಎಸ್.ಎಂ ಜಯಕರ ಇತರರು ಇದ್ದರು.