ಮುಂಡಗೋಡ: ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಪಟ್ಟಣದ ಹಳೂರ ಓಣಿಯಲ್ಲಿರುವ ಗ್ರಾಮದೇವಿ ಶ್ರೀಮಾರಿಕಾಂಬಾ (ದ್ಯಾಮವ್ವ) ದೇವಿಯ ಜಾತ್ರಾ ಮಹೋತ್ಸವದ ದಿನಾಂಕ ನಿಗದಿಯಾಗಿದ್ದು ಫೆ.15ರಂದು ಆರಂಭವಾಗಿ ಫೆ.23ರಂದು ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಶ್ರೀಮಾರಿಕಾಂಬಾದೇವಿ ಟ್ರಸ್ಟ್‌ನ ಅಧ್ಯಕ್ಷ ರಮೇಶ ಕಾಮತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
6ನೇ ಜಾತ್ರಾ ಮಹೋತ್ಸವ ಇದಾಗಿದ್ದು ಫೆ.15ರಂದು ದೇವಿ ಮೂರ್ತಿ ಪ್ರತಿಷ್ಠಾಪನೆ, ಮಾಂಗಲ್ಯ ಧಾರಣೆ, ಚಂಡಿಹವನ ಮತ್ತು ಫೆ.16ರಂದು ದೇವಿ ರಥೋತ್ಸವ ಜರುಗಲಿದೆ. ಪ್ರತಿ ಸಲದಂತೆ ಈ ಬಾರಿಯೂ ಜಾತ್ರೆಗೆ ಮುನ್ನ ಪಟ್ಟಣ ವ್ಯಾಪ್ತಿಯ ಜನರು ಮಂಗಳವಾರ ಹಾಗೂ ಶುಕ್ರವಾರ ಸೇರಿ ಒಟ್ಟು ಐದು ಹೊರಬೀಡುಗಳನ್ನು ಆಚರಿಸಬೇಕು ಎಂದು ಅವರು ತಿಳಿಸಿದ್ದಾರೆ.
ಹೊರಬೀಡಿನ ದಿನಗಳು: ಜ.25ರಂದು ಮೊದಲ ಹೊರಬೀಡು, ಜ.28ರಂದು 2ನೇ ಹೊರಬೀಡು, ಫೆ.1ರಂದು 3ನೇ ಹೊರಬೀಡು, ಫೆ.4ರಂದು 4ನೇ ಹೊರಬೀಡು, ಫೆ.8ರಂದು 5ನೇ ಹಾಗೂ ಕೊನೇಯ ಹೊರಬೀಡು(ಅಂಕಿ ಹಾಕುವುದು).