ಹೊನ್ನಾವರ: ತಾಲೂಕಿನ ಹಳದೀಪುರ ಗ್ರಾಮದ ಕಾಸೊಳ್ಳಿ ಭಾಗದ ನಿವಾಸಿಗಳು ಓಡಾಡುತ್ತಿದ್ದ ಕಾಲು ದಾರಿ ಬಂದ್ ಮಾಡಿದ್ದರಿಂದ ಊರಿನ ಗ್ರಾಮಸ್ಥರು ಸಹಾಯಕ ಆಯುಕ್ತೆ ಮಮತಾದೇವಿಗೆ ದೂರಿದ್ದರು. ಈ ಬಗ್ಗೆ ಖುದ್ದಾಗಿ ಅವರೇ ಬಂದು ಸ್ಥಳ ಪರಿಶೀಲಿಸಿದರು.
ಆ ಭಾಗದ ಮನೆಗೆಳಿಗೆ ಖುದ್ದು ಭೇಟಿ ನೀಡಿದ ಸಹಾಯಕ ಆಯುಕ್ತರು ಜನರಿಂದ ಮಾಹಿತಿ ಪಡೆದರು. ಇಲ್ಲಿ ಪರಿಶಿಷ್ಟ ಜಾತಿ ಮನೆಗಳಿದ್ದು, ಗಣೇಶ ಮಹಾಬಲೇಶ್ವರ ಭಟ್ ಇವರು ವಿನಾಃಕಾರಣ ಓಡಾಡುವ ದಾರಿಯನ್ನು ಬಂದ್ ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದು, ಇರುವ ಒಂದೇ ದಾರಿಯನ್ನು ಬಂದ್ ಮಾಡಿದ್ದರಿಂದ ನಮಗೆ ಓಡಾಡಲು ತೊಂದರೆ ಆಗುತ್ತಿದೆ ಎಂದು ತಿಳಿಸಿದರು. ಇದರಿಂದ ಮಕ್ಕಳಿಗೆ ಹಾಗೂ ವೃದ್ಧರಿಗೆ ಆಸ್ಪತ್ರೆಗೆ, ಶಾಲೆಗೆ ಹೋಗಲು ತೊಂದರೆ ಆಗುತ್ತಿರುವ ಬಗ್ಗೆ ಸಹಾಯಕ ಆಯುಕ್ತರ ಗಮನಕ್ಕೆ ತಂದರು.
ತಾಲೂಕಾ ಪಂಚಾಯತಿಯ ಸೇತುವೆ ಕಾಮಗಾರಿ ಹಾಗೂ ಗ್ರಾಮ ಪಂಚಾಯಿತಿಯ ಕೆರೆ ಕಾಮಗಾರಿ ವೀಕ್ಷಿಸಿದರು. ಕೆರೆಯಿಂದ ನೀರು ತೋಟ ಹಾಗೂ ಗದ್ದೆಗಳಿಗೆ ಹರಿಯುತ್ತಿದ್ದು, ಅದನ್ನು ಏಳು ಕುಟುಂಬಗಳು ಬಳಸುತ್ತಿದ್ದಾರೆ. ಆದರೆ ಈಗ ಅದಕ್ಕೂ ಅವಕಾಶ ಇಲ್ಲದಂತಾಗಿದೆ. ಪಲ್ಲಕ್ಕಿಯ ಮೂಲಕ ದೇವರ ಉತ್ಸವ ಮೂರ್ತಿ ಇದೆ ದಾರಿಯಲ್ಲಿ ಬರುವುದರಿಂದ ಅದಕ್ಕೂ ಅಡ್ಡಿಪಡಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದರು.
ಅಧಿಕಾರಿಗಳು ಅತಿ ಶೀಘ್ರದಲ್ಲೇ ಸಮಸ್ಯೆ ಬಗೆ ಹರಿಸುವುದಾಗಿ ಉಪವಿಭಾಗಾಧಿಕಾರಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ನಾಗರಾಜ್ ನಾಯ್ಕಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್ ಮುಕುಂದ ನಾಯ್ಕ, ನಿವೃತ್ತ ತಹಶೀಲ್ದಾರ ವಿ.ಆರ್.ಗೌಡ, ತಾಲೂಕಾ ಪಂಚಾಯತ ಮಾಜಿ ಅಧ್ಯಕ್ಷ ಉಮಾರಾವ ಹಾಗೂ ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತಿದ್ದರು.