ಶಿರಸಿ: ಸಾಹಿತ್ಯ ಪರಿಷತ್ತಿನ ಯಾವುದೇ ಜಾತಿ ಗುಂಪುಗಳಿಗೆ ಅಂಟಿಕೊಳ್ಳದೇ ಈ ಬಾರಿಯ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿದ್ದು, ಯೋಗ್ಯ ಅಭ್ಯರ್ಥಿ ಎನಿಸಿದರೆ ಮತ ನೀಡಿ ಎಂದು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತಿನಲ್ಲಿ ರಾಜಕೀಯ, ಗುಂಪುಗಾರಿಕೆ ಬೇರೊತ್ತಿದೆ. ರೋಹಿದಾಸ ನಾಯಕರು 15 ವರ್ಷ ಆಳಿದರು. ಅರವಿಂದ ಕರ್ಕಿಕೋಡಿ 5 ವರ್ಷ ಆಳಿ ಸಾಹಿತ್ಯ ಪರಿಷತ್ತಿನ ಲೆಕ್ಕ ನೀಡಲಾರದೇ ಚುನಾವಣಗೆ ಸ್ಪರ್ಧಿಸಲಾರದರೆ ಕಣದಿಂದ ಹಿಂದೆ ಸರಿದಿದ್ದಾರೆ. ಸಾಹಿತ್ಯ ಪರಿಷತ್ತಿನಲ್ಲಿ ರಾಜಕೀಯ ಬೇರು ಬಿಟ್ಟಿದೆ. ಚುನಾವಣೆಯಲ್ಲಿ ಮತ ಹಾಕಿ ಗೆಲ್ಲಿಸಿದರೆ ಅಂಥವರನ್ನು ಸಾಹಿತ್ಯ ಸಮ್ಮೇಲನ ಜಿಲ್ಲಾಧ್ಯಕ್ಷರನ್ನಾಗಿ ಮಾಡಬೇಕಾಗುತ್ತದೆ. ಅಂಥದ್ದೊಂದು ಸಂಪ್ರದಾಯ ಬೆಳೆದು ಬಂದಿದೆ ಎಂದರು. ಯಾವುದೇ ಗುಂಪುಗಾರಿಕೆಯಲ್ಲಿ ಭಾಗಿಯಾಗದೇ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಯೋಗ್ಯ ಅಭ್ಯರ್ಥಿ ಎನಿಸಿದರೆ ಮತ ನೀಡಿ ಎಂದು ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ಸೋಲಲಿ ಅಥವಾ ಗೆಲ್ಲಲಿ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹತ್ತಾರು ವರ್ಷಗಳಿಂದ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಒಂದೊಮ್ಮೆ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದರೆ, ಉತ್ತರ ಕನ್ನಡ ಜಿಲ್ಲೆಯ ಅರ್ಹ ಸಾಹಿತಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಲನದ ಸರ್ವಾಧ್ಯಕ್ಷ ಸ್ಥಾನ ಸಿಗುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡವುದಾಗಿ ತಿಳಿಸಿದರು.
ಎಲ್ಲರ ಸಹಕಾರದಲ್ಲಿ ಪ್ರತಿ ತಾಲೂಕಿನಲ್ಲಿ ಸರ್ವ ಸಮಾಜದ ಸಾಹಿತ್ಯಾಸಕ್ತರ ಕನಿಷ್ಠ ಸಾವಿರ ಜನರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನಾಗಿ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದ ಅವರು, ಸಾಹಿತ್ಯ ಪರಿಷತ್ತಿನ ಪ್ರತಿ ಸದಸ್ಯನಿಂದ, ಸಾಹಿತ್ಯಾಸಕ್ತ ಸಾರ್ವಜನಿಕರಿಂದ ಕನಿಷ್ಠ ದಿನಕ್ಕೆ 1 ರೂ. ಯಂತೆ ಅಮೃತನಿಧಿಯಾಗಿ; ವಾರ್ಷಿಕವಾಗಿ ಪಡೆದು ರಸೀದಿ ನೀಡಿ ‘ಸಾಹಿತ್ಯ ಸಂಚಿ’ ಯೋಜನೆ ಮಾಡಿ ಸಾಹಿತ್ಯ ಪರಿಷತ್ತನ್ನು ಸ್ವಾವಲಂಬಿಯಾಗಿ ರೂಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಚುನಾವಣೆಗೆ ನಿಂತು ಸೋತವರನ್ನು ಹಾಗೂ ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರನ್ನು, ಇತರ ಕನ್ನಡ ಸಂಘಟನೆಗಳ ಅಧ್ಯಕ್ಷರನ್ನು ಸೇರಿಸಿ ಪರಿಷತ್ತಿಗೆ ಗೌರವ ಮಾರ್ಗದರ್ಶಿ ಮಂಡಳಿ ರೂಪಿಸುವುದಾಗಿ ತಿಳಿಸಿದರು.