ಯಲ್ಲಾಪುರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ವಿವಿಧ ಬೆಳೆಗಳಿಗೆ ಅಪಾರ ಹಾನಿಯಾಗಿದೆ. ಈ ಬಗ್ಗೆ ಸರ್ಕಾರದಿಂದ ಸೂಕ್ತಪರಿಹಾರ ಕ್ರಮ ದೊರಕಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೋಜನಾ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಶುಕ್ರವಾರ ಪ್ರಕಟಣೆ ನೀಡಿರುವ ಅವರು, ಈ ವರ್ಷದ ಮಳೆ ಯಮರಾಯನ ರೂಪದಲ್ಲಿ ಬಂದು ಜನ ಜೀವನವು ತತ್ತರಿಸುವಂತೆ ಆಗಿದೆ. ಕೆಲ ತಿಂಗಳ ಹಿಂದೆ ಸುರಿದ ಭೀಕರ ಮಳೆಗೆ ತಾಲೂಕಿನ ಕಳಚೆ ಹಾಗೂ ಅನೇಕ ಹಳ್ಳಿಗಳು ಅಸ್ತವ್ಯಸ್ತವಾಗಿವೆ. ಈಗ ಬೆಳೆ ಕೈಗೆ ಬಂದ ಸಂದರ್ಭದಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಕೃಷಿ ಬೆಳೆಗಳು ಸಂಪೂರ್ಣ ನಾಶವಾಗಿದೆ. ಭತ್ತ ಜೋಳ ಗೋವಿನ ಜೋಳ ಬೆಳೆಗಳು ನೀರಿನಲ್ಲಿ ಮುಳುಗಿ ಹೋಗಿದೆ. ಹತ್ತಿ ಬೆಳೆ ನೀರಿನಲ್ಲಿ ತೊಯ್ದು ನಾಶವಾಗಿದೆ.
ಅಡಿಕೆ ಬೆಳೆ ಕೊಯ್ಯಲು ಸಾಧ್ಯವಾಗದೇ ಹಣ್ಣು ಅಡಿಕೆ ಮೊಳಕೆಯೊಡೆಯುತ್ತಿದೆ. ಇಂತಹ ಸ್ಥಿತಿಯಲ್ಲಿ ರೈತನ ಜೀವನದ ಭವಿಷ್ಯ ಕರಾಳವಾಗಿದೆ. ಸರಕಾರ ಇದನ್ನು ಪ್ರಥಮ ಪ್ರಾಶಸ್ಯವನ್ನಾಗಿ ಪರಿಗಣಿಸಿ ರೈತರನ್ನು ಬದುಕಿಸಲು ಸರ್ವವಿಧದ ಪ್ರಯತ್ನ ಮಾಡಬೇಕೆಂದು ಸರಕಾರಕ್ಕೆ ವಿನಂತಿಸುತ್ತೇನೆ ಎಂದಿದ್ದಾರೆ.