ಶಿರಸಿ: ಕ್ರೀಡೆಯಲ್ಲಿ ಕಲಿತ ಅನುಭವನ್ನು ಎಲ್ಲರಿಗೆ ಕಳಿಸಬೇಕು ಎನ್ನುವ ಉದ್ದೇಶದಿಂದ ನ.25 ಕ್ಕೆ ಇಲ್ಲಿನ ಮಾರಿಕಾಂಬಾ ಸ್ಟೇಡಿಯಂನಲ್ಲಿ ಕ್ರೀಡಾ ಕಾರ್ಯಾಗಾರ ಹಮ್ಮಿಕೊಂಡಿರುವುದಾಗಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ವಿಜೇತ ಕಾಶಿನಾಥ ನಾಯ್ಕ ತಿಳಿಸಿದರು.
ಅವರು ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ಧಿಗೋಷ್ಟಿ ಆಯೋಜಿಸಿ ಮಾತನಾಡಿ, ಜಿಲ್ಲೆಯ ಎಲ್ಲ ದೈಹಿಕ ಶಿಕ್ಷಕರಿಗಾಗಿ ಕ್ರೀಡಾಕಾರ್ಯಾಗಾರ ಹಮ್ಮಿಕೊಂಡಿದ್ದು, ಕೇವಲ ದೈಹಿಕ ಶಿಕ್ಷಕರಲ್ಲದೇ ಕ್ರೀಡಾ ಆಸಕ್ತಿರು ಯಾರು ಬೇಕಾದರೂ ಪಾಲ್ಗೊಳ್ಳಬಹುದಾಗಿದೆ. ಕ್ರೀಡೆಯಲ್ಲಿ ಉಂಟಾಗುವ ಗಂಭೀರ ಸಮಸ್ಯೆಗಳು ಹಾಗೂ ಪೆಟ್ಟುಗಳನ್ನು ಕ್ರೀಡಾಪಟು ಹೇಗೆ ನಿಭಾಯಿಸಬೇಕು ಎನ್ನುವ ವಿಷಯದ ಕುರಿತು ಮಾಹಿತಿ ಕಾರ್ಯಾಗಾರ ನಡೆಸಲಾಗುವುದು. ಈ ಕುರಿತು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದರು.
ಶಿರಸಿಯಲ್ಲಿ ಭವಿಷ್ಯದ ಕ್ರೀಡಾ ಪಟುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಪೋಟ್ರ್ಸ್ ಅಕಾಡೆಮಿ ಸ್ಥಾಪನೆ ಮಾಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ ಅವರು, ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ಪ್ರಯತ್ನಗಳು ನಡೆದಿವೆ. ಯುವ ಕ್ರೀಡಾಪಟುಗಳು ಕ್ರೀಡೆಗಳಿಗೆ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಾರೆ. ಸಾಮಥ್ರ್ಯವಿದ್ದರೂ ಆತ್ಮವಿಶ್ವಾಸದ ಕೊರತೆಯಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕ್ರೀಡಾಪಟುಗಳಿಗೆ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿಯೂ ತರಬೇತಿ ನೀಡುವ ಕೆಲಸ ಅಕಾಡೆಮಿ ವತಿಯಿಂದ ಮಾಡುವುದಾಗಿ ತಿಳಿಸಿದರು.
ಅಕಾಡೆಮಿಯಲ್ಲಿ ವಾಲಿಬಾಲ್, ಕಬ್ಬಡ್ಡಿ, ಜಾವೆಲಿನ್ ಥ್ರೋ, ಡಿಸ್ಕ್ ಥ್ರೋ ಸೇರಿದಂತೆ ಅಥ್ಲೆಟಿಕ್ಸ್ ಕುರಿತು ತರಬೇತಿ ನೀಡಲು ಯೋಜನೆ ರೂಪುಗೊಳ್ಳಲಿದೆ. ಇಲ್ಲಿನ ತನಕ ಸಾಕಷ್ಟು ಜನರಿಗೆ ತರಬೇತಿ ನೀಡಿದ ಅನುಭವ ಇದ್ದು, ತಮ್ಮ ಎಲ್ಲ ಅನುಭವನ್ನು ಜಿಲ್ಲೆಯ ಕ್ರೀಡಾಪಟುಗಳಿಗೆ ಧಾರೆಯೆರೆದು ಜಿಲ್ಲೆಯಿಂದ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳನ್ನು ತರಬೇತಿಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.