• Slide
  Slide
  Slide
  previous arrow
  next arrow
 • ಜೀವನದಲ್ಲಿ ಮನಸ್ಸು-ಮಾತು-ಕೃತಿ ಸೇರಿದರೆ ಸುಖಮಯ; ರಾಘವೇಶ್ವರ ಶ್ರೀ

  300x250 AD


  ಗೋಕರ್ಣ: ಜೀವನ ಒಂದು ಸಂಗೀತ. ಅಂದರೆ ಸಂಗೀತದಲ್ಲಿ ಭಾವ, ರಾಗ, ತಾಳ ಮೇಳೈಸಿದಂತೆ ಜೀವನದಲ್ಲಿ ಮನಸ್ಸು, ಮಾತು ಮತ್ತು ಕೃತಿ ಒಂದಾದರೆ ಸುಖಮಯ ಎಂದು ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.


  ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಶುಕ್ರವಾರ ಅಶೋಕೆಯ ವಿದ್ಯಾವಿಶ್ವ ಸಭಾಂಗಣದಲ್ಲಿ ಆಯೋಜಿಸಿದ್ದ ಭಾವಸಂಗೀತೋತ್ಸವದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಜೀವನದಲ್ಲಿ ‘ಭರತ’ ಬರಬೇಕಾದರೆ ಭಾವ, ರಾಗ ಹಾಗೂ ತಾಳ ಅಗತ್ಯ. ಭಾವ ಎಂದರೆ ನಮ್ಮ ಭಾವನೆ ಅಥವಾ ಮನಸ್ಸು; ರಾಗ ಅಂದರೆ ಮಾತು ಹಾಗೂ ತಾಳ ಎಂದರೆ ಕೃತಿ. ಈ ಮೂರು ಮೇಳೈಸಿದರೆ ಆತ ಮಹಾತ್ಮನಾಗುತ್ತಾನೆ. ಇಲ್ಲದಿದ್ದರೆ ದುರಾತ್ಮನಾಗುತ್ತದೆ. ಭಾವಕ್ಕೆ ತಕ್ಕ ಮಾತು, ಮಾತಿಗೆ ತಕ್ಕ ಕೃತಿ ಅಂದರೆ ನುಡಿದಂತೆ ನಡೆಯುವುದು ಮತ್ತು ನಡೆಯದಿರುವುದೇ ಮಹಾತ್ಮ ಮತ್ತು ದುರಾತ್ಮರ ನಡುವಿನ ವ್ಯತ್ಯಾಸ ಎಂದು ವಿಶ್ಲೇಷಿಸಿದರು.


  ಭಾವ ಎನ್ನುವುದು ನಮ್ಮ ಮನಸ್ಸಿನ ಭಾವನೆಗಳನ್ನು ಪರಮಾತ್ಮನಿಗೆ ತಿಳಿಸುವ ಮಾಧ್ಯಮ. ಭಾವವೇ ಸಂಗೀತದ ಜೀವ. ಭಾವ ಇಲ್ಲದ ಸಂಗೀತವಾಗಲೀ, ಬದುಕಾಗಲೀ ಅದು ಬರಡು. ಕಲ್ಲು, ಯಂತ್ರ ಹಾಗೂ ಮನುಷ್ಯನಿಗೆ ಇರುವ ವ್ಯತ್ಯಾಸವೇ ಭಾವ. ಭಾವವೇ ಜೀವದ ಸೆಲೆ. ನಮ್ಮ ಜೀವಕ್ಕೆ ಆತ್ಮಕ್ಕೆ ಚೈತನ್ಯ ನೀಡುವುದು ಭಾವ ಎಂದು ಹೇಳಿದರು.


  ಭಾರತೀಯ ಸಂಗೀತದ ಪಿತಾಮಹ ಎನಿಸಿದ ಭರತಮುನಿ ಹೇಳುವಂತೆ ಸಂಗೀತ ಭಾವ, ರಾಗ, ತಾಳಗಳ ಸಂಗಮ. ತಾಳ ಹಾಗೂ ರಾಗವಿಲ್ಲದೆಯೂ ಭಾವವೊಂದಿದ್ದರೆ ಹಾಡಲು ಸಾಧ್ಯ. ಭಾವವೇ ಇಲ್ಲದಿದ್ದರೆ ಅದು ಸಂಗೀತ ಎನಿಸಿಕೊಳ್ಳುವುದಿಲ್ಲ. ಆದ್ದರಿಂದ ಸಂಗೀತದಲ್ಲಿ ಭಾವವೇ ಮುಖ್ಯ. ಈ ಗುಟ್ಟನ್ನು ವಿವಿವಿ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವುದೇ ಭಾವ ಸಂಗೀತೋತ್ಸವದ ಉದ್ದೇಶ ಎಂದು ಸಂಗೀತೋತ್ಸವಕ್ಕೆ ನಿರ್ದೇಶನ ನೀಡಿದ ಸ್ವಾಮೀಜಿ ಸ್ಪಷ್ಟಪಡಿಸಿದರು.


  ಜೀವನ ಸುಗಮವಾಗಬೇಕಾದರೆ ಮನಸ್ಸು, ಮಾತು ಹಾಗೂ ಕೃತಿಯಲ್ಲಿ ಸಾಮ್ಯತೆ ಇರಬೇಕು. ನುಡಿದಂತೆ ನಡೆಯುವುದು ರಾಮನ ವ್ಯಕ್ತಿತ್ವವಾದರೆ, ಮಾತಿಗೆ ತಪ್ಪುವುದು ರಾವಣದ ವ್ಯಕ್ತಿತ್ವ. ಇಂಥ ಸೂಕ್ಷ್ಮಗಳನ್ನು ಎಳವೆಯಲ್ಲೇ ಅರ್ಥ ಮಾಡಿಕೊಂಡರೆ, ಜೀವನದಲ್ಲಿ ನುಡಿದಂತೆ ನಡೆಯಲು ಸಾಧ್ಯವಾಗುತ್ತದೆ ಎಂದರು.

  300x250 AD


  ವಿವಿವಿ ಪಾರಂಪರಿಕ ವಿಭಾಗದ ಪ್ರಾಚಾರ್ಯರಾದ ಸತ್ಯನಾರಾಯಣ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಹವ್ಯಕ ಮಹಾಮಂಡಲ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ. ವಿವಿವಿ ಪ್ರಾಚಾರ್ಯ ಮಹೇಶ್ ಹೆಗಡೆ, ಉಪಪ್ರಾಚಾರ್ಯರಾದ ಸೌಭಾಗ್ಯ, ಮಹಾಮಂಡಲ ಸೇವಾ ವಿಭಾಗದ ಮುಖ್ಯಸ್ಥ ಅರವಿಂದ ದರ್ಬೆ ಉಪಸ್ಥಿತರಿದ್ದರು.


  ಶ್ರೀಮಜ್ಜಗದ್ಗುರು ಶಂಕರಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ಸಾನ್ನಿಧ್ಯ ಮತ್ತು ನಿರ್ದೇಶನದಲ್ಲಿ ನಡೆದ ಸಂಗೀತೋತ್ಸವದಲ್ಲಿ ನಾಡಿನ ಖ್ಯಾತ ಮತ್ತು ಉದಯೋನ್ಮುಖ ಗಾಯನ ಪ್ರತಿಭೆಗಳು ಕಾರ್ಯಕ್ರಮ ಪ್ರಸ್ತುತಪಡಿಸಿದರು.


  ವಿದ್ಯಾವಿಶ್ವ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ನಡೆದ ಸಂಗೀತೋತ್ಸವದಲ್ಲಿ ವಿದುಷಿ ಕಾಂಚನ ಎಸ್.ಶ್ರುತಿರಂಜನಿ, ವಿದುಷಿ ಶಂಕರಿ ಮೂರ್ತಿ ಬಾಳಿಲ, ದೀಪಿಕಾ ಭಟ್, ಸಾಕೇತ ಶರ್ಮಾ, ಪೂಜಾ ಕೋರಿಕ್ಕಾರು, ರಘುನಂದನ ಬೇರ್ಕಡವು ಮತ್ತು ವಿಶ್ವೇಶ್ವರ ಭಟ್ ಖರ್ವಾ ಗಾಯನ ಪ್ರಸ್ತುತಪಡಿಸುವರು. ಇದರ ಜತೆಗೆ ಗಣೇಶ್ ಭಾಗವತ್ ಅವರ ತಬಲಾ ವಾದನ, ಸುಬ್ರಹ್ಮಣ್ಯ ಹೆಗಡೆಯವರ ಸಿತಾರ್ ವಾದನ, ಪ್ರಜಾನಲೀಲಾಕುಶ ಉಪಾಧ್ಯಾಯ ಅವರ ಹಾರ್ಮೋನಿಯಂ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಮತ್ತು ವಿಶ್ವೇಶ್ವರ ಹೆಗಡೆ ಮೂರೂರು ಅವರ ಅಭಿನಯ ಪುಟ್ಟ ಹೃದಯಗಳನ್ನು ತುಂಬಿಸಿತು.

  Share This
  300x250 AD
  300x250 AD
  300x250 AD
  Leaderboard Ad
  Back to top