ಮುಂಡಗೋಡ: ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಬಿಸ್ಕೇಟ್ ತುಂಬಿದ ಲಾರಿಯ ಮೇಲೆ ಗಾಳಿ ಸಹಿತ ಮಳೆಗೆ ಬೃಹತ್ತಾಕಾರದ ಮರವೊಂದು ಉರುಳಿ ಬಿದ್ದ ಪರಿಣಾಮ ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ ನಸುಕಿನ ಜಾವ ಪಟ್ಟಣದ ಪ್ರವಾಸಿಮಂದಿರ ಹತ್ತಿರ ಜರುಗಿದೆ.
ಬುಧವಾರ ರಾತ್ರಿ ಹುಬ್ಬಳ್ಳಿ ಕಡೆಯಿಂದ ಶಿರಸಿ ಕಡೆಗೆ ಬಿಸ್ಕೇಟ್ ತುಂಬಿಕೊಂಡು ಹೊರಟಿದ್ದ ಲಾರಿಯು ಚಾಲಕನಿಗೆ ನಿದ್ದೆ ಬಂದ ಕಾರಣ ಲಾರಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಚಾಲಕ ಮಲಗಿದ್ದ ರಾತ್ರಿ ಗಾಳಿ ಸಹಿತ ಧಾರಾಕಾರವಾಗಿ ಸುರಿದ ಮಳೆಗೆ ಲಾರಿ ನಿಲ್ಲಿಸಿದ್ದ ಸನಿಹದಲ್ಲೆ ಹಳೆಯ ಬೃಹತ್ ಮರವೊಂದು ಬುಡಸಮೇತವಾಗಿ ಉರುಳಿ ಪಕ್ಕದ ಕಂಪೌಂಡ್‍ಗೆ ತಾಗಿ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಲೈನ್‍ಗಳು ಕಟ್ಟಾಗಿ ಮರವೂ ನಿಧಾನವಾಗಿ ಲಾರಿಯ ಮೇಲೆ ಬಿದ್ದಿರುವುದರಿಂದ ಲಾರಿಗೆ ಯಾವೂದೆ ಹಾನಿ ಸಂಭವಿಸಿಲ್ಲ. ಲಾರಿಯಲ್ಲಿ ಮಲಗಿದ್ದ ಚಾಲಕ ಮರ ಬಿದ್ದ ತಕ್ಷಣವೆ ಲಾರಿಯಿಂದ ಕೆಳಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಶಿರಸಿ-ಹುಬ್ಬಳ್ಳಿ ಮಾರ್ಗದಲ್ಲಿ ಕೆಲವು ಕಾಲ ರಸ್ತೆ ಬಂದಾಗಿತ್ತು. ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸನಿಹವಿರುವ ಪಟ್ರೋಲ್ ಬಂಕ್‍ನ ಆವರಣದ ಮುಖಾಂತರ ಕೆಲ ಸಮಯ ಸಂಚರಿಸಿದವು.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮರದ ಟೊಂಗೆಗಳನ್ನು ಕಟ್ ಮಾಡಿ. ಮರದ ಬುಡವನ್ನು ಕ್ರೇನ್ ಮೂಲಕ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.