ಮುಂಡಗೋಡ: ತಾಲೂಕಿನ ಬುಧವಾರ ರಾತ್ರಿ ಗುಡುಗು- ಗಾಳಿ ಸಹಿತ ಧಾರಾಕಾರವಾಗಿ ಸುರಿದ ಮಳೆಗೆ ಬೆಡಸಗಾಂವ, ಕೂರ್ಲಿ ತೊಗ್ರಳ್ಳಿ, ಅಟಬೈಲ್, ಹಾಲಹರಲಿ, ಹೊಸ್ತೋಟ್, ಉಮ್ಮಚ್ಚಗಿ, ಶ್ಯಾನವಳ್ಳಿ, ಬೆಕ್ಕೋಡ್, ಬಾಳೆಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ತೋಟದಲ್ಲಿದ್ದ ಅಡಿಕೆ ಹಾಗೂ ಗದ್ದೆಗಳಲ್ಲಿ ಕಟಾವು ಮಾಡಿದ ಭತ್ತದ ಬೆಳೆಗಳು ನೀರಿನಲ್ಲಿ ಕೊಚ್ಚಿಹೊಗಿದ್ದು ಲಕ್ಷಾಂತರ ಬೆಲೆ ಬಾಳುವ ರೈತರ ಬೆಳೆ ಹಾನಿಯಾಗಿದೆ.
ಮಳೆ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿದೆ. ಆದರೆ ಬುಧವಾರ ಸಾಯಂಕಾಲದಿಂದ ಗುಡುಗು, ಗಾಳಿ ಸಹಿತ ಮಳೆ ಭಾರಿ ಪ್ರಮಾಣದಲ್ಲಿ ಸುರಿದಿದ್ದರಿಂದ ಅಪಾರ ಪ್ರಮಾಣದ ತೋಟಗಳಲ್ಲಿನ ಕಟಾವಿಗೆ ಬಂದ ಅಡಿಕೆ ಮಳೆ ಗಾಳಿಗೆ ಉದುರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿವೆ. ಕಟಾವು ಮಾಡಿ ಮನೆಯ ಅಂಗಳದಲ್ಲಿ ಹಾಗೂ ತೋಟಗಳಲ್ಲಿ ಒಣಗಿಸಿದ ಹಾಗೂ ಕಟಾವು ಮಾಡಿ ಒಣ ಹಾಕಿದ ಭತ್ತದ ಬೆಳೆ ಕೂಡ ಮಳೆ ನೀರಿನಲ್ಲಿ ತೇಲಿ ಹೋಗಿದ್ದು ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಎಲ್ಲ ಬೆಳೆಯು ನೀರು ಪಾಲಾಗಿದೆ.
ಬೆಳೆಗಾಗಿ ಮಾಡಿದ ಸಾಲ ತೀರಿಸುವುದು ಹೇಗೆ?: ಸರ್ಕಾರದಿಂದ ಬೆಳೆಸಾಲ ಕೊಡುತ್ತಾರೆ. ಬೆಳೆ ವಿಮೆ ಕಟ್ಟಿಸಿಕೊಳ್ಳುತ್ತಾರೆ. ಹೀಗೆ ಹತ್ತು ಹಲವು ಪ್ರಶ್ನೆಗಳು ರೈತರಲ್ಲಿ ಕಾಡುತ್ತಿವೆ. ಪ್ರಕೃತಿ ವಿಕೋಪದಿಂದ ಆದ ನಷ್ಟಕ್ಕೆ ಪರಿಹಾರ ನೀಡಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದೆ ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಡಕೆ ಹಾಗೂ ಭತ್ತದ ಬೆಳೆಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಳೆಯಿಂದ ಹಾನಿಯಾದ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಶೀಲಿಸಿದ್ದಾರೆ.