ಹೊನ್ನಾವರ: ಸಾಹಿತ್ಯ ಕ್ಷೇತ್ರದಸಾಧಕರನ್ನು ನಾಡಿಗೆ ಪರಿಚಯಿಸಿ, ಸದಸ್ಯತ್ವ ಸಂಖ್ಯೆ ಹೆಚ್ಚಿಸುವುದೆ ನನ್ನ ಗುರಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ ಹೇಳಿದರು.
ಪಟ್ಟಣದ ಖಾಸಗಿ ಹೊಟೆಲ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಸತತ 37 ವರ್ಷದಿಂದ ನಾಗರಿಕ ಎಂಬ ಪತ್ರಿಕೆಯ ಪ್ರಧಾನ ಸಂಪಾದಕನಾಗಿ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಾ ಬಂದಿದ್ದೇನೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತನ್ನು ಹಾಗೂ ಅದರಲ್ಲಿರುವ ಸಾಹಿತ್ಯ ಪ್ರೇಮಿ ಸದಸ್ಯರನ್ನು ಜೊತೆಗೂಡಿಸಿಕೊಂಡು ಪಾರದರ್ಶಕವಾಗಿ ಸಾಹಿತ್ಯ ಪ್ರೇಮದ ಪರಿಷತ್ತಾಗಿ ರೂಪಿಸುವ ಹಂಬಲದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದೇನೆ ಎಂದು ಅವರು ತಿಳಿಸಿದರು.
ಜಿಲ್ಲೆಯ 13 ಲಕ್ಷ ಜನಸಂಖ್ಯೆಯಲ್ಲಿ ಕೇವಲ 4ರಿಂದ 5 ಸಾವಿರ ಜನರು ಮಾತ್ರ ಸಾಹಿತ್ಯ ಪರಿಷತ್ತಿಗೆ ನೋಂದಣಿಯಾಗಿದ್ದು ಕನ್ನಡ ಸಾಹಿತ್ಯಾಸಕ್ತರು ಶೇಕಡಾ. 10 ರಷ್ಟು ಸಹ ಇಲ್ಲವಾಗಿದೆ. ನನ್ನ ಉದ್ದೇಶ ಕನ್ನಡ ಸಾಹಿತ್ಯವನ್ನು ಪ್ರತಿ ತಾಲೂಕಿನಲ್ಲಿ ಕನಿಷ್ಠ ಸಾವಿರ ಸದಸ್ಯರನ್ನು ಸೇರಿಸಿ ಸರ್ವ ಸಮಾಜದ ಪರಿಷತ್ತಾನಾಗಿ ಮಾಡುವ ಹಂಬಲ. ಅಕ್ಷರ ಉದ್ಯಮದಲ್ಲಿ ಕೃಷಿಕನಾಗಿರುವ ಹಿನ್ನೆಲೆ ನೈತಿಕತೆಯೊಂದಿಗೆ ಕೆಲಸ ನಿರ್ವಹಿಸಲಿದ್ದೇನೆ. ಯಾವುದೇ ಗುಂಪುಗಾರಿಕೆ, ಜಾತಿಗೆ ಅಂಟಿಕೊಳ್ಳದೇ, ಚುನಾವಣೆಗೆ ನಿಂತ ಯಾವೊಬ್ಬ ಅಭ್ಯರ್ಥಿಯನ್ನು ದ್ವೇಷಿಸದೇ ನನ್ನ ಧ್ಯೇಯೋದ್ದೇಶಕ್ಕೆ ಮತ ನೀಡುವಂತೆ ಮನವಿ ಮಾಡಲಿದ್ದೇನೆ ಎಂದರು.
ಹಿರಿಯ ಪತ್ರಕರ್ತರಾದ ದಿನೇಶ್ ಹೆಗಡೆ ಮಾತನಾಡಿ ಸಾಹಿತ್ಯ ಪರಿಷತ್ತಿನಲ್ಲಿ ಸ್ವಹಿತಾಶಕ್ತಿ,ಗುಂಪುಗಾರಿಕೆ ದೂರವಾಗಬೇಕು. ಕೃಷ್ಣಮೂರ್ತಿ ಹೆಬ್ಬಾರ್ ಅವರು ಸಾಹಿತ್ಯ ಪರಿಷತ್ತಿಗೆ ಆಯ್ಕೆಯಾಗಿ ಹೊಸಭಾಷ್ಯ ಬರೆಯಬೇಕೆನ್ನುವುದು ಸಾಹಿತ್ಯ ಪ್ರೇಮಿಗಳ ಆಶಯವಾಗಿದೆ ಎಂದರು.