ಶಿರಸಿ: ತಾಲೂಕಿನಲ್ಲಿ ಅಬ್ಬರಿಸುತ್ತಿರುವ ಅಕಾಲಿಕ ಮಳೆಯಿಂದ ರೈತರು ಕಂಗೆಟ್ಟಿದ್ದು, ಕೊಯ್ಲಿಗೆ ಬಂದ ಫಸಲು ಕೈಗೆ ಸಿಕ್ಕಿಲ್ಲ ಎನ್ನುವಂತಾಗಿದೆ.
ಶಿರಸಿ- ಸಿದ್ದಾಪುರ ತಾಲೂಕಿನಾದ್ಯಂತ ಅಕಾಲಿಕ ಮಳೆ ಸುರಿಯುತ್ತಿದ್ದರಿಂದ ಕೊಯ್ಲಿಗೆ ಬಂದ ಭತ್ತ ಮತ್ತು ಅಡಿಕೆ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಅಲ್ಲದೇ ಕೊಯ್ತ ಭತ್ತ ಮೊಳಕೆ ಒಡೆಯುತ್ತಿದ್ದು, ಅಡಿಕೆಗೆ ಶೀಲಿಂದ್ರ ತಗುಲಿ ಹಾಳಾಗುತ್ತಿದೆ.
ಸಿದ್ದಾಪುರ ಭಾಗದಲ್ಲಿ ಬಹುತೇಕ ಭತ್ತದ ಗದ್ದೆಗಳು ಒಣಗಿ ನಿಂತಿದ್ದು, ಮಳೆ ಹೊಡೆತಕ್ಕೆ ಭತ್ತ ನೆಲಕ್ಕುರುಳಿದೆ. ಗದ್ದೆಯಲ್ಲಿ ನಿಂತ ನೀರಿನಿಂದ ಭತ್ತ ಕೊಳೆಯುತ್ತಿದೆ. ಸಿದ್ದಾಪುರದ ಬೇಡ್ಕಣಿ, ಮನಮನೆ, ಕಾನಗೋಡು, ಕಾವಂಚೂರು, ಕೋಲಸಿರ್ಸಿ, ಶಿರಳಗಿ, ಹಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಲ್ಲದೇ ಶಿರಸಿ, ಬನವಾಸಿ ಗ್ರಾಮೀಣ ಪ್ರದೇಶದಲ್ಲಿ ಭತ್ತದ ಕಟಾವು ಪ್ರಕ್ರಿಯೆ ನಡೆಯುತ್ತಿದೆ. ಆದರೆ ಈವೇಳೆ ಸುರಿದ ಮಳೆ ಅಕ್ಷರಃ ಹೈರಾಣೆಬ್ಬಿಸಿಬಿಟ್ಟಿದೆ.
ಮೋಡ ಮುಸುಕಿದ ವಾತಾವರಣದಿಂದ ರೈತರು ಕೊಯ್ಲು ಪ್ರಕ್ರಿಯೆಯನ್ನೇ ನಿಲ್ಲಿಸಿದ್ದಾರೆ. ಈ ನಡುವೆ ಗದ್ದೆಗಳಿಗೆ ಮಂಗ, ಇಲಿ, ಹೆಗ್ಗಣ, ಪಕ್ಷಿಗಳ ಕಾಟವೂ ಹೆಚ್ಚುತ್ತಿದೆ. ಕಾರಣ ಕೂಡಲೇ ಸರ್ಕಾರ ಸ್ಥಳಪರಿಶೀಲನೆ ನಡಸಿ ಸೂಕ್ತ ಪರಿಹಾರ ನೀಡಬೇಕು ಎಂಬ ಆಗ್ರಹ ರೈತ ವಲಯದಿಂದ ಕೇಳಿಬರುತ್ತಿದೆ.