ಅಂಕೋಲಾ: ತಾಲೂಕಿನ ಹೊನ್ನಳ್ಳಿಯ ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡರ ಮನೆಗೆ ತಾಲೂಕಾ ಪತ್ರಕರ್ತರ ಸಂಘದವರು ಪದ್ಮಶ್ರೀ ಪುರಸ್ಕೃತೆ, ವೃಕ್ಷಮಾತೆ ಹೊನ್ನಳ್ಳಿ ತುಳಸಿ ಗೌಡ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿದರು.
ತುಳಸಿ ಗೌಡ ಮತ್ತು ಪತ್ರಕರ್ತರ ಸಂಬಂಧ ಈಗಿನದಲ್ಲ. ಮೂರು ದಶಕಗಳ ಹಿಂದಿನಿಂದ ಅನ್ಯೋನ್ಯತೆಯಿದೆ ಎನ್ನುತ್ತ ಅವರನ್ನು ಬರಮಾಡಿಕೊಂಡರು. ನಂತರ ದೆಹಲಿ ಪ್ರವಾಸದ ಮತ್ತು ಪ್ರಶಸ್ತಿ ಸಮಾರಂಭದ ಖುಷಿಯನ್ನು ಹಂಚಿಕೊಂಡರು.
ಪದ್ಮಶ್ರೀ ಸುಕ್ರೀಗೌಡರಾಗಲೀ, ಪದ್ಮಶ್ರೀ ತುಳಸೀ ಗೌಡರಾಗಲೀ ಈಗಲೂ ಪತ್ರಕರ್ತರನ್ನುಅವರವರ ಹೆಸರಿನಿಂದಲೇ ಕೂಗಿ ಕರೆಯುತ್ತಾರೆ. ಯಾವುದೇ ಸಮಾರಂಭದಲ್ಲಿದ್ದರೂ ಕರೆದು ಮಾತನಾಡಿಸುತ್ತಾರೆ. ತಮ್ಮ ಮನೆಗೆ ಆಗಮಿಸಿದ ಪತ್ರಕರ್ತರನ್ನು ತುಂಬ ಸಲುಗೆಯಿಂದ ತಮ್ಮ ಮಕ್ಕಳಂತೆ ಮಾತನಾಡಿಸಿದ ತುಳಸಜ್ಜಿ ತಮ್ಮ ಸಾಧನೆಗಳನ್ನು ಪತ್ರಿಕೆಗಳ ಮೂಲಕ ಲೋಕಕ್ಕೆ ಪರಿಚಯಿಸಿದ್ದನ್ನು ನೆನೆಸಿಕೊಂಡರು. ಕಾಲಕಾಲಕ್ಕೆ ಪತ್ರಿಕೆಗಳಲ್ಲಿ ವರದಿಗಳನ್ನು ಪ್ರಕಟಿಸಿ ಅದು ಸರಕಾರಕ್ಕೆ ತಲುಪಿ ಪದ್ಮಶ್ರೀ ಪಡೆಯುವ ಮಟ್ಟಿಗೆ ತಲುಪಿತು. ಅವರ ಉಪಕಾರ ಎಂದೂ ಮರೆಯುವದಿಲ್ಲ ಎಂದು ತನ್ನದೇ ಭಾಷೆಯಲ್ಲಿ ಹೇಳಿದರು. ಪ್ರಶಸ್ತಿ ಬಂದರೂ ತಮ್ಮ ಗಿಡ ಬೆಳೆಸುವ ಕಾಯಕವನ್ನು ಮುಂದುವರೆಸುತ್ತೇನೆ ಎಂದು ಮನದಾಳದ ಮಾತಾಡಿದರು.
ಈ ಸಂದರ್ಭದಲ್ಲಿ ಉತ್ತರಕನ್ನಡದ ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆಯೂ ಒಲವು ತೋರಿಸಿದ್ದು, ಎಲ್ಲರಿಗೂ ಒಳ್ಳೆಯದಾಗಬೇಕು ಎಂದಿದ್ದಾರೆ. ತುಳಸಿ ಗೌಡರ ಮನೆಯಂಗಳದಲ್ಲಿ ಪತ್ರಕರ್ತರ ಸಂಘದ ಪರವಾಗಿಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ತಾಲೂಕಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷರಾಘುಕಾಕರಮಠ ಮಾತನಾಡಿ, ತುಳಸಿ ಗೌಡರಿಗೆ ಪ್ರಶಸ್ತಿ ಬಂದಿರುವದುಎಲ್ಲರಿಗೂ ಸಂತೋಷವಾಗಿದೆ. ಅದರಲ್ಲೂಅವರನ್ನು, ಅವರ ಸಾಧನೆಗಳನ್ನು ಲೋಕಕ್ಕೆ ಪರಿಚಯಿಸಿ ಸರಕಾರದವರೆಗೆ ಮುಟ್ಟುವಂತೆ ಮಾಡಿದ ಪತ್ರಿಕಾ ಮಾದ್ಯಮದವರಿಗಂತೂ ಇನ್ನ ಖುಷಿ ಕೊಟ್ಟಿದೆ. ತುಳಸಿ ಗೌಡರು ನೂರ್ಕಾಲ ಬಾಳಿ ಇನ್ನೂ ಹೆಚ್ಚಿನ ಪುರಸ್ಕಾರಗಳನ್ನು ಪಡೆಯಲಿ ಎಂದರು.
ಹೊಸದಿಗಂತ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥ ವಿಠ್ಠಲದಾಸಕಾಮತ ಮತ್ತು ಇನ್ನಿತರ ಪತ್ರಿಕೆಯ ಕೆ.ರಮೇಶ, ವಾಸುದೇವ ಗುನಗಾ, ಸುಭಾಶಕಾರೇಬೈಲ್, ಅರುಣ ಶೆಟ್ಟಿ, ವಿದ್ಯಾಧರ ಮೊರಬ, ನಾಗರಾಜ ಮಂಜುಗುಣಿ, ನಾಗರಾಜ ಜಾಂಬಳೇಕರ ಹಾಜರಿದ್ದರು.