ಮುಂಡಗೋಡು: ಮೂರು ಮರಿಯಾನೆ ಸೇರಿದಂತೆ 7 ಕಾಡಾನೆಗಳು ರೈತರ ಗದ್ದೆ ತೋಟಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಭತ್ತ ಹಾಗೂ ಅಡಕೆ ಬೆಳೆಯನ್ನು ನಾಶ ಪಡಿಸಿದ ಘಟನೆ ಕಾತೂರ ಅರಣ್ಯ ವಲಯದ ಆಲಳ್ಳಿ ಹಾಗೂ ಮರಗಡಿ ಭಾಗದಲ್ಲಿ ಜರುಗಿದೆ.
ಏಳು ಕಾಡಾನೆಗಳ ಹಿಂಡು ಬೆಳಗಿನ ಜಾವ ತಾಲೂಕಿನ ಮರಗಡಿ, ಕಾತೂರ, ಸಿಂಗನಳ್ಳಿ, ಆಲಳ್ಳಿ ಗ್ರಾಮಗಳ ಭಾಗದ ಅರಣ್ಯದಲ್ಲಿ ಪ್ರತ್ಯಕ್ಷವಾಗಿದ್ದು ವಿವಿಧ ರೈತರ ತೋಟ ಗದ್ದೆಗಳಲ್ಲಿ ಬೆಳೆದ ಬೆಳೆಗಳನ್ನು ತಿಂದು, ತುಳಿದು ಹಾನಿ ಮಾಡಿವೆ. ಮರಗಡಿ ಗ್ರಾಮದ ಪರಮೇಶ್ವರ ರಾವಳ ಎಂಬವರ ಅಡಕೆ ತೋಟಕ್ಕೆ ದಾಳಿ ನಡೆಸಿದ ಕಾಡಾನೆಗಳು 40ಕ್ಕೂ ಅಧಿಕ ಅಡಕೆ ಗಿಡಗಳನ್ನು ಮುರಿದು ಹಾಕಿವೆ ಆರು ವರ್ಷದ ಅಡಕೆ ಗಿಡಗಳನ್ನು ಕಾಡಾನೆಗಳು ಮುರಿದು ತುಳಿದು ಹಾಕಿವೆ.
ಆಲಳ್ಳಿ ಗ್ರಾಮದ ನಾಗರಾಜ ಮೂಲಿಮನಿ ಎಂಬುವರ 1 ಎಕರೆ 11 ಗುಂಟೆಯಲ್ಲಿ ಬೆಳೆದ ಅಡಕೆ ತೋಟಕ್ಕೆ ದಾಳಿ ನಡೆಸಿ 100 ಅಡಕೆ ಗಿಡಗಳನ್ನು ಮುರಿದು ಹಾನಿ ಮಾಡಿವೆ, ಹಾಗೂ ಮಹಾದೇವ ಎಂಬುವವರ ತೋಟಕ್ಕೆ ನುಗ್ಗಿ ಸುಮಾರು 20 ಅಡಿಕೆ ಗಿಡಗಳನ್ನು ಹಾನಿ ಮಾಡಿವೆ. ಅಕ್ಕ ಪಕ್ಕದ ಭತ್ತದ ಗದ್ದೆಗಳಿಗೂ ದಾಳಿ ನಡೆಸಿ ಹಾನಿ ಮಾಡಿದ ಬಗ್ಗೆ ರೈತರು ತಿಳಿಸಿದ್ದಾರೆ.
ಐದಾರು ವರ್ಷಗಳ ಕಾಲ ಕಷ್ಟ ಪಟ್ಟು ಬೆಳೆಸಿದ್ದ ಅಡಕೆ ಗಿಡಗಳು ಒಂದೆ ರಾತ್ರಿಯಲ್ಲಿ ಕಾಡಾನೆ ದಾಳಿಗೆ ನೆಲಕಚ್ಚಿ ಸುಮಾರು 2 ಲಕ್ಷಕ್ಕೂ ಅಧಿಕ ಹಾನಿ ಯಾಗಿದೆ. ಅರಣ್ಯ ಇಲಾಖೆಯವರು ಬಂದು ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಪಂಚನಾಮೆ ಮಾಡಿದ್ದಾರೆಂದು ತಿಳಿದುಬಂದಿದೆ.