ಶಿರಸಿ: ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ವಾರ್ಷಿಕ ಸರ್ವಸಾಧಾರಣ ಸಭೆಯು ನ.13 ರಂದು ಸಂಘದ ಆವಾರದಲ್ಲಿ ನಡೆಯಿತು.
2020-21 ನೇ ಸಾಲಿನಲ್ಲಿ ಸಂಸ್ಥೆಯು 34.10 ಕೋಟಿ ವ್ಯವಹಾರ ನಡೆಸಿದ್ದು, ರೂ 17.49 ಲಕ್ಷ ಲಾಭಗಳಿಸಿದೆ. ಸಂಸ್ಥೆಯ ವ್ಯವಹಾರ ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ. 39.33 ರಷ್ಟು ಹೆಚ್ಚಿದೆ. ದಿನಾಂಕ 31.03.2021 ಕ್ಕೆ ಇದ್ದಂತೆ ಸಹಕಾರಿಯು 16.99 ಲಕ್ಷ ಷೇರು ಬಂಡವಾಳ ಹೊಂದಿದ್ದು, ರೂ 1.98 ಕೋಟಿ ಠೇವಣಿ ಹೊಂದಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಆರ್ಥಿಕ ವರ್ಷದ ಲಾಭ ಹಾನಿ ಕುರಿತು ಚರ್ಚಿಸಲಾಯಿತು ಹಾಗೂ ಲಾಭ ವಿಭಾಗಣೆ ಮತ್ತು ಮುಂದಿನ ವರ್ಷದ ಅಂದಾಜು ವೆಚ್ಚವನ್ನು ಅನಮೋದಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಶಂಭುಲಿಂಗ ಹೆಗಡೆಯವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿ, ಸಂಸ್ಥೆಯು ಹೊಸ-ಹೊಸ ವಿಚಾರಗಳಿಂದ ಗುರುತಿಸಿಕೊಂಡಿದ್ದು, ನಮ್ಮ ಭಾಗದ ಪ್ರಮುಖ ಬೆಳೆಯಾದ ಬಾಳೆಕಾಯಿಗೆ ಪ್ರಥಮ ಬಾರಿಗೆ ಟೆಂಡರ್ ವ್ಯವಸ್ಥೆ ಕಲ್ಪಿಸಲಾಗಿದೆ, ವರ್ಷದ ಹಂಗಾಮಿನಲ್ಲಿ, ಹಸಿ ಕೊಳೆ ಅಡಿಕೆಗೂ ಸಹ ಟೆಂಡರ ವ್ಯವಸ್ಥೆಯಡಿ ಮಾರುಕಟ್ಟೆ ಕಲ್ಪಿಸಿದ ಪ್ರಥಮ ಸಂಸ್ಥೆಯಾಗಿದೆ. ಅಲ್ಲದೇ ಸದಸ್ಯರಿಗೆ ಹೆಚ್ಚಿನ ಸೇವೆ ಒದಗಿಸುವ ನಿಟ್ಟಿನಲ್ಲಿ ಒಣ ಅಡಿಕೆ ಟೆಂಡರ್ ಆರಂಭಿಸಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ವತಿಯಿಂದ ಕಾಳುಮೆಣಸು, ಏಲಕ್ಕಿ, ಅರಿಷಿಣ, ಶುಂಠಿ ಹಾಗೂ ಜಾಯಿಪತ್ರೆಯನ್ನು ರಫ್ತು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕದಂಬ ಮಾರ್ಕೆಟಿಂಗ್ ಮೂಲಕ ಚಾಲಿ ಸುಲಿಯುವ ಹಾಗೂ ಆರಿಸುವ ಸೌಲಭ್ಯ ಆರಂಭಿಸಲಾಗುವದು ಎಂದರು. ಅಲ್ಲದೇ ಸಂಸ್ಥೆಯ ಆವರಣದಲ್ಲಿ ಆರೋಗ್ಯಕರ ನೈಸರ್ಗಿಕ ಪಾನೀಯಗಳ ಕೌಂಟರ್ ತೆರೆಯಲು ಉದ್ದೇಶಿಸಲಾಗಿದೆ ಎಂತ ತಿಳಿಸಿದರು. ಸಂಸ್ಥೆಯ ಎಲ್ಲ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು. ವ್ಯವಸ್ಥಾಪಕ(ಪ್ರಭಾರ) ರಾಜೇಂದ್ರ ಜೋಶಿ ವಾರ್ಷಿಕ ವರದಿ ವಾಚಿಸಿ ನಿರೂಪಿಸಿದರು.