ಶಿರಸಿ: ನಗರದ ಮರಾಠಿಕೊಪ್ಪ ಭಾಗದ ಮೇಲಿನ ನೀರು ಈಗಾಗಲೇ ಪುಟ್ಟನಮನೆ ಗ್ರಾಮದ ಹಳ್ಳಕ್ಕೆ ಬರುತ್ತಿದ್ದು, ಹೊಸದಾಗಿ ಪ್ರಗತಿ ನಗರ ಭಾಗದಲ್ಲಿ ಹರಿಯುವ ನೀರನ್ನೂ ಪುಟ್ಟನಮನೆ ಭಾಗಕ್ಕೆ ಬಿಡುತ್ತಿರುವ ನಗರ ಸಭೆ ಕಾರ್ಯಕ್ಕೆ ಸ್ಥಳಿಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಪುಟ್ಟನಮನೆ ಸರ್ವೆ ನಂಬರ್ 114 ರಲ್ಲಿ ಶಿರಸಿ ನಗರದಿಂದ ಹರಿದು ಬರುವ ಮಲಿನ ನೀರು ಅಡಿಕೆ ತೋಟದ ಕಾಲುವೆ ಸೇರುತ್ತಿದೆ. ಅಲ್ಲಿಂದ ಪುಟ್ಟನಮನೆ, ಹಾರೇಪಾಲ, ಬೆಂಡೆಗದ್ದೆ, ಹಳದೋಟ ಮುಂತಾದ ಗ್ರಾಮಗಳ ಮೂಲಕ ಶಾಲ್ಮಲಾ ನದಿಗೆ ಈ ನೀರು ತಲುಪುತ್ತಿದೆ. ಪರಿಣಾಮ ನದಿ ಮೂಲ ಹಾಳಾಗುತ್ತಿದೆ.
ಅಲ್ಲದೇ ಮಳೆಗಾಲದಲ್ಲಿ ನೀರು ಹರಿಯುವುದರಿಂದ ಕೃಷಿ ಜಮೀನಿಗೂ ಧಕ್ಕೆಯಾಗುತ್ತದೆ. ವಾತಾವರಣದಲ್ಲಿ ಧುರ್ವಾಸನೆ ಸೇರಿಕೊಂಡು ರೋಗ ರುಜಿನೆಗಳಿಗೆ ಕಾರಣವಾಗಲಿದೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾರಣ ನಗರಸಭೆ ನಗರದ ನೀರನ್ನ ಗ್ರಾಮೀಣ ಭಾಗಕ್ಕೆ ಬಿಡದೆ ಮೊದಲಿದ್ದ ಮಾರ್ಗದಲ್ಲೇ ಹರಿಯುವಂತೆ ವ್ಯವಸ್ಥೆ ಮಾಡಬೇಕು ಎಂದು ವಿಶ್ವನಾಥ ಹೆಗಡೆ ಪುಟ್ಟನ ಮನೆ ಇವರು ಒತ್ತಾಯಿಸಿದ್ದಾರೆ.