ಯಲ್ಲಾಪುರ: ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ ಯಲ್ಲಾಪುರ ಠಾಣಾ ವ್ಯಾಪ್ತಿಯ ಎಸ್ಸಿ ಎಸ್ಟಿ ಸಮುದಾಯದವರ ಸಭೆ ನಡೆಸಲಾಯಿತು.
ಪಿಎಸ್‍ಐ ಸುರೇಶ ಯಳ್ಳೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮುದಾಯದ ಕುಂದು ಕೊರತೆ ಆಲಿಸಲಾಯಿತು. ಸಭೆಯಲ್ಲಿ ಮುಖ್ಯವಾಗಿ ಎಸ್ಸಿ, ಎಸ್ಟಿ ಸಮುದಾಯದ ಮುಗ್ದ ಜನರ ಮತಾಂತರ ತಡೆಯುವ ಬಗ್ಗೆ ಚರ್ಚಿಸಲಾಯಿತು. ಅಲ್ಲದೇ ಶಾಲಾ ಕಾಲೇಜುಗಳ ಹತ್ತಿರ ತಂಬಾಕು ಸೇರಿದಂತೆ ಮಾದಕ ವಸ್ತುಗಳ ಮಾರಾಟ ಮಾಡದಂತೆ ಸೂಚನೆ ನೀಡಲಾಯಿತು. ಎಸ್ಸಿ, ಎಸ್ಟಿ ಸಮುದಾಯ ಅಭಿವೃದ್ಧಿ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ಅದು ದುರ್ಬಳಕೆ ಆಗದಂತೆ ಜಾಗೃತೆ ವಹಿಸುವಂತೆ ಮಾಹಿತಿ ನೀಡಲಾಯಿತು.
ಸ್ವಯಂ ಉದ್ಯೋಗ ಮಾಡಲು ಮುಂದೆ ಬರುವವರಿಗೆ ಸರ್ಕಾರದಿಂದ ಸಿಗುವ ಆರ್ಥಿಕ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಫೋಕ್ಸೊ ಕಾಯುದೆ ಬಗ್ಗೆ ತಿಳಿಸಿದ ಪೆÇಲೀಸರು ಯಾವುದೇ ರೀತಿಯ ದೌರ್ಜನ್ಯಗಳು ನಡೆದಲ್ಲಿ ತಮಗೆ ದೂರು ಸಲ್ಲಿಸುವಂತೆ ತಿಳಿಸಿದರು.
ಪಾಲಕರು ಮಕ್ಕಳ ಮೇಲೆ ನಿಗಾ ಇಡಬೇಕು. ಅಕ್ರಮ ಚಟುವಟಿಕೆಯಲ್ಲಿ ಯಾರೂ ಭಾಗವಹಿಸದೆ ಸರ್ಕಾರದ ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬರುವಂತೆ ಮನವರಿಕೆ ಮಾಡಿಕೊಡಲಾಯಿತು. ಸಭೆಯಲ್ಲಿ ಸಮಾಜಕಲ್ಯಾಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.