• Slide
    Slide
    Slide
    previous arrow
    next arrow
  • ಚುನಾವಣಾ ಅಖಾಡದಲ್ಲಿ ಕಡವೆ ಶ್ರೀಪಾದ ಹೆಗಡೆ; ಸಮನ್ವಯ ಸಾಧಿಸುವ ಯುವನಾಯಕಗೆ ಮಣೆ ಹಾಕಲಿದೆಯೇ ಕಾಂಗ್ರೆಸ್ ?

    300x250 AD

    ಶಿರಸಿ: ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣಾ ಕಾವು ರಂಗೇರಿದ್ದು, ಜಿಲ್ಲೆಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಹಾಗು ಈ ಬಾರಿ ಗೆದ್ದರೆ ಮೊದಲ ಸಲ ಅಧಿಕಾರಕ್ಕೇರುವ ಭಾಜಪಾ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.

    ಪಂಚಾಯತ, ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಬಹುತೇಕ ಜಿಲ್ಲೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದರ ಹಿನ್ನಲೆಯಲ್ಲಿ, ಬಿಜೆಪಿಯಿಂದ ಟಿಕೆಟ್ ಪಡೆದುಕೊಳ್ಳಲು ಆಕಾಂಕ್ಷಿಗಳ ಸಾಲು ದೊಡ್ಡದಿದೆ. ಇನ್ನು ಕಾಂಗ್ರೆಸ್ ನಿಂದ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಾಲಿ ಸದಸ್ಯ ಎಸ್ ಎಲ್ ಘೋಟ್ನೇಕರ್ ಸ್ಪರ್ಧಿಸಲು ಹಿಂದೇಟು ಹಾಕಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆಲ್ಲುವ ಕುದುರೆಯನ್ನು ಹುಡುಕುವ ಭರದಲ್ಲಿದೆ ಎನ್ನಲಾಗಿದೆ.

    ಕಾಂಗ್ರೆಸ್ ಭೀಷ್ಮ ದೇಶಪಾಂಡೆಗೆ ಪಕ್ಷದ ಗೆಲುವು ಅನಿವಾರ್ಯ:

    ಜಿಲ್ಲೆಯಲ್ಲಿ ಹಿಡಿತವಿರುವ ಕಾಂಗ್ರೆಸ್ ಹುರಿಯಾಳುಗಳಲ್ಲಿ ಆರ್ ವಿ ದೇಶಪಾಂಡೆ ಮೊದಲಿಗರು ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಜಕೀಯದ ಮೇಲಾಟ ಅವರಿಗೆ ಹೊಸತಲ್ಲ. ಆದರೆ ಈ ಬಾರಿ ಸ್ವಪಕ್ಷದವರೇ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿ, ಅಡ್ಡಿಯಾಗಿರುವುದು ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ. ಎರಡು ಬಾರಿಗೆ ಅಧಿಕಾರವೇರಿದ ಘೋಟ್ನೇಕರ್ ಈ ಬಾರಿ ಪರಿಷತ್ ಬದಲು ವಿಧಾನಸಭೆ ಆಕಾಂಕ್ಷಿ ಎಂದು, ಟಾಂಗ್ ಕೊಟ್ಟಿದ್ದರ ಹಿನ್ನಲೆಯಲ್ಲಿ ಹೊಸಬರನ್ನು, ಬಣ ರಾಜಕೀಯ ಮಾಡದೇ ಪಕ್ಷಕ್ಕೆ ನಿಷ್ಠರಾಗಿರುವವರನ್ನು ಅಭ್ಯರ್ಥಿಯಾಗಿ ಘೋಷಿಸಿ, ಗೆಲ್ಲಿಸುವ ಅವಶ್ಯಕತೆ, ಅನಿವಾರ್ಯತೆ ಕಾಂಗ್ರೆಸ್ ಭೀಷ್ಮ ಎನಿಸಿರುವ ಆರ್ವಿಡಿಯದ್ದಾಗಿದೆ.

    ಈ ಚುನಾವಣೆಯ ಫಲಿತಾಂಶ ದೇಶಪಾಂಡೆ-ಆಳ್ವಾ, ಬಣ ರಾಜಕೀಯದ ಅಸ್ತಿತ್ವಕ್ಕಿಂತ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ಭವಿಷ್ಯವನ್ನು ನಿರ್ಣಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗಲಾರದು. ಒಂದು ವೇಳೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತರೆ, ಅಲ್ಲಿಗೆ ಪಕ್ಷದ ಸಂಘಟನೆಗೆ ಬಲವಾದ ಹೊಡೆತ ಬೀಳುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಏರುಪೇರಾಗುವ ಸಂಭವವೇ ಹೆಚ್ಚು. ಈ ಎಲ್ಲ ಕಾರಣದಿಂದ ಈ ಚುನಾವಣೆಯಲ್ಲಿ ನಿರಾಯಾಸವಾಗಿ ಗೆಲ್ಲುವ, ಬಣ ರಾಜಕೀಯಕ್ಕೆ ತುತ್ತಾಗದ ಮತ್ತು ಜಿಲ್ಲೆಯ ಎಲ್ಲ ನಾಯಕರ ನಡುವೆ ಸಮನ್ವಯ ಮೂಡಿಸುವ ಅಭ್ಯರ್ಥಿಗೆ ಪಕ್ಷದಿಂದ ಟಿಕೆಟ್ ಕೊಡುವಲ್ಲಿ ದೇಶಪಾಂಡೆ ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಿದೆ.

    ಹೊಸಬರಿಗೆ ಮಣೆ; ಪಕ್ಷ ನಿಷ್ಠರಿಗೆ ಮನ್ನಣೆ:

    ತನ್ನದೇ ಶಾಸಕರ ಪಕ್ಷಾಂತರದಿಂದ ಸರ್ಕಾರ ಕಳೆದುಕೊಂಡು ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಈ ಬಾರಿ ಎಚ್ಚೆತ್ತುಕೊಳ್ಳುವ ನಿರೀಕ್ಷೆಯಿದೆ. ಬಣ ನಾಯಕರಿಗಿಂತ ಪಕ್ಷ ನಿಷ್ಠರಿಗೆ ಅವಕಾಶ ನೀಡಿದರೆ, ಪಕ್ಷದ ದೃಷ್ಟಿಯಿಂದ ಹೆಚ್ಚು ಅನುಕೂಲ ಎಂಬುದು ಕಾಂಗ್ರೆಸ್ ಒಳಗಿರುವ ಥಿಂಕ್ ಟ್ಯಾಂಕ್ ಅಭಿಪ್ರಾಯ. ಜೊತೆಗೆ ಹೊಸಮುಖಗಳಿಗೆ ಈ ಬಾರಿ ಜಿಲ್ಲೆಯಲ್ಲಿ ಅವಕಾಶ ನೀಡಿದರೆ, ಮುಂಬರುವ ವಿಧಾನಸಭೆ ಚುನಾವಣೆ ವೇಳೆ ಅವರ ಮೂಲಕ ಸೀಟು ಗೆಲ್ಲುವ ಲೆಕ್ಕಾಚಾರವೂ ಇದ್ದಿರಬಹುದು. ಕಳೆದ ಕೆಲವು ದಿನಗಳಿಂದ ಕಾಂಗ್ರೆಸಿನಲ್ಲಾದ ಬದಲಾವಣೆ ಗಮನಿಸಿದರೆ ಈ ಬಾರಿ ಬಣ ರಾಜಕೀಯ, ವರಿಷ್ಠರ ಬೆಂಬಲಿಗರಿಗೆ ಕೈಕೊಟ್ಟು ಜನರಿಗೆ, ಪಕ್ಷಕ್ಕೆ ಹತ್ತಿರವಾಗಿರುವವರಿಗೆ ಬೆನ್ನು ತಟ್ಟುವ ಕಾರ್ಯ ಕಾಂಗ್ರೆಸ್ ಹೈ ಕಮಾಂಡ್ ಮಾಡಿದರೆ ಅಚ್ಛರಿಪಡಬೇಕಿಲ್ಲ.

    ಯಾರ್ಯಾರಿಗಿದೆ ಅವಕಾಶ; ಆಕಾಂಕ್ಷಿಗಳ ಪಟ್ಟಿ ಇಲ್ಲಿದೆ:

    ಕಾಂಗ್ರೆಸಿನಿಂದ ಈ ಬಾರಿಯ ಪರಿಷತ್ ಚುನಾವಣೆಗೆ ಆಕಾಂಕ್ಷಿಗಳು ಕೆಲವೇ ಮಂದಿಯಿದ್ದರೂ, ಪಕ್ಷ ಯಾರಿಗೆ ಆದ್ಯತೆ ನೀಡುತ್ತದೆ ಎಂಬುದು ಮುಖ್ಯವೆನಿಸುತ್ತದೆ. ಪ್ರಮುಖವಾಗಿ ಮೂವತ್ತಕ್ಕೂ ಅಧಿಕ ಕಾಲದಿಂದ ಸಾಮಾಜಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ರವೀಂದ್ರ ನಾಯ್ಕ ಹೆಸರು ಕೇಳಿಬಂದಿತ್ತು. ಜಿಲ್ಲೆಯಲ್ಲಿ ಸಂಘಟನೆಯ ವಿಚಾರದಲ್ಲಿ ರವೀಂದ್ರ ನಾಯ್ಕಗೆ ಪರ್ಯಾಯ ಯಾರೂ ಇಲ್ಲವೆಂದರೂ ತಪ್ಪಾಗಲಾರದು. ಹೈಕಮಾಂಡ್ ಲೆವಲ್ ನಲ್ಲಿಯೂ ಒಳ್ಳೆ ಅಭಿಪ್ರಾಯವಿದೆ. ಆದರೆ ಪಕ್ಷ ಬಿಟ್ಟು, ಬೇರೆ ಪಕ್ಷಕ್ಕೆ ತೆರಳಿದ್ದು, ಆಳ್ವಾ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು ಇವರಿಗೆ ಹಿನ್ನಡೆಯಾಗುವ ಸಂಭವವಿದೆ ಎನ್ನಲಾಗಿದೆ.

    300x250 AD

    ಇನ್ನು ಮಾರ್ಗರೇಟ್ ಆಳ್ವ ಪುತ್ರ ನಿವೇದಿತ್ ಆಳ್ವಾ ಹೆಸರು ಕೇಳಿಬರುತ್ತಿದ್ದರೂ ಸಹ, ನಾಯಕರೇ ಬಂದು ಕಿರೀಟ ತೊಡಿಸಿದರೆ ಮಾತ್ರ ರಾಜ್ಯಭಾರ ಮಾಡುವ ಮನಸ್ಥಿತಿಯಲ್ಲಿದಂತೆ ಕಂಡುಬರುತ್ತದೆ ಎಂಬುದು ಪಕ್ಷದ ಕೆಲ ಕಾರ್ಯಕರ್ತರ ಮಾತಾಗಿದೆ. ಕುಮಟಾದ ಸಾಯಿ ಗಾಂವ್ಕರ್ ಪರ ಹೈಕಮಾಂಡಿನಲ್ಲಿ ಬ್ಯಾಟಿಂಗ್ ಮಾಡುವ ನಾಯಕರ ಕೊರತೆ ಎದ್ದು ಕಾಣುವ ವಿಚಾರವಾಗಿದೆ.

    ಕಡವೆ ಕುಡಿ ಶ್ರೀಪಾದ ಹೆಗಡೆ ಕಡವೆ ಗೆಲ್ಲುವ ಕುದುರೆ !:

    ಇವರೆಲ್ಲರ ಹೊರತಾಗಿ ಕೇಳಿಬರುತ್ತಿರುವ ಅಚ್ಚರಿಯ ಹೆಸರೆಂದರೆ ಕಡವೆ ಕುಟುಂಬದ ಕುಡಿ, ದಿ. ಕಡವೆ ಹೆಗಡೆಯವರ ಮೊಮ್ಮನಾಗಿರುವ ಶ್ರೀಪಾದ ಹೆಗಡೆ ಕಡವೆಯವರದ್ದಾಗಿದೆ. ಕಳೆದ 17 ಕ್ಕೂ ಅಧಿಕ ವರ್ಷಗಳಿಂದ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ, ಪಕ್ಷದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವುದರ ಜೊತೆಗೆ ಯುವಕರನ್ನು ಯೂಥ್ ಕಾಂಗ್ರೆಸ್ ಮೂಲಕ ಪಕ್ಷ ಸಂಘಟನೆಯಲ್ಲಿ ಹೆಚ್ಚು ತೊಡಗುವಂತೆ ಮಾಡಿದ್ದು ಗಮನಾರ್ಹ ಸಂಗತಿಯಾಗಿದೆ. ಯಾವುದೇ ಬಣ ರಾಜಕೀಯದಲ್ಲಿ ಗುರುತಿಸಿಕೊಳ್ಳದೇ, ಪಕ್ಷ ನೀಡಿದ ಜವಾಬ್ದಾರಿಯನ್ನು ಇಚ್ಛಾಶಕ್ತಿಯ ಕೊರತೆಯಾಗದಂತೆ ನಿರ್ವಹಿಸಿದ್ದು ರಾಜ್ಯ ನಾಯಕರ ಗಮನ ಸೆಳೆದ ಬಹುಮುಖ್ಯ ಅಂಶವೆಂದರೆ ತಪ್ಪಾಗಲಾರದು. ಜೊತೆಗೆ ಶತಮಾನಗಳಿಗೂ ಅಧಿಕ ಕಾಲ ಸಹಕಾರಿ ಕ್ಷೇತ್ರದಲ್ಲಿ ಕಡವೆ ಕುಟುಂಬದ ತ್ಯಾಗ, ಪರಿಶ್ರಮ ಮತ್ತು ನಿರಂತರ ಪ್ರವಾಹದಲ್ಲಿರುವ ಸಹಕಾರಿ ಸೇವೆ ಎಲ್ಲದಕ್ಕಿಂತ ದೊಡ್ಡದು.

    ಪ್ರಸ್ತುತ ರಾಜ್ಯ ಕಿಸಾನ್ ಕಾಂಗ್ರೆಸ್ ಸಮಿತಿಯ ರಾಜ್ಯ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಶ್ರೀಪಾದ ಹೆಗಡೆ ಕಡವೆ ಸರಳತೆ, ಸೌಮ್ಯ ಸ್ವಭಾವ, ರಾಜಕೀಯ ಚಾಣಾಕ್ಷತೆ ಹಾಗು ಪಕ್ಷನಿಷ್ಠೆ ಸ್ಥಳೀಯ ಕಾರ್ಯಕರ್ತರು ಹಾಗು ನಾಯಕರ ಮನವೊಲಿಸುವಲ್ಲಿ ಸಫಲವಾಗಿದೆ. ಪಕ್ಷದಲ್ಲಿ ಅಜಾತಶತ್ರು ಎಂದೇ ಗುರುತಿಸಿಕೊಂಡಿರುವುದರ ಜೊತೆಗೆ ಜನಸಾಮಾನ್ಯರ ಸಮಸ್ಯೆಗೆ ನಿರಾಯಾಸವಾಗಿ ಧ್ವನಿಯಾಗುವ ಕಡವೆ ಕುಡಿ ಶ್ರೀಪಾದ ಹೆಗಡೆ ಕಡವೆ ಗೆಲ್ಲುವ ಕುದುರೆಗಳ ಸಾಲಿನಲ್ಲಿ ಅಗ್ರಗಣ್ಯವಾಗಿ ನಿಲ್ಲುತ್ತಾರೆ.

    ಕುಟುಂಬದ ಹಿರಿಯರಂತೆ ರಾಜಕೀಯದ ಜೊತೆಗೆ ಸಹಕಾರಿ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಇವರು, ಪ್ರಸ್ತುತ ದಿ ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಸೊಸೈಟಿಯ ನಿರ್ದೇಶಕರಾಗಿ, ಜನತಾ ಬಝಾರ್ ನಿರ್ದೇಶಕರಾಗಿ ಸೇವೆಗೈದು, ಪ್ರಸ್ತುತ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ ಬೆಂಗಳೂರು ಇದರ ನಿರ್ದೇಶಕರಾಗಿ ಸಹಕಾರ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ.

    ಜಿಲ್ಲೆಯ ಕಾಂಗ್ರೆಸ್ ಇತಿಹಾಸದ ಪುಟಗಳನ್ನೊಮ್ಮೆ ನೋಡಿದರೆ, ಅಂದಿನ ಕಾಂಗ್ರೆಸ್ ಪಕ್ಷದ ಸಂಘಟನೆ, ಜವಾಬ್ದಾರಿ ನಿರ್ವಹಣೆಯಲ್ಲಿಯೂ ಕಡವೆ ಕುಟುಂಬದ ಶ್ರಮ ಎದ್ದು ಕಾಣುತ್ತದೆ. ದಿ. ಶ್ರೀಪಾದ ಹೆಗಡೆಯವರ ತಂದೆ, ‘ಕಡವೆ ಗಾಂಧಿ’ ಎಂದೇ ಪ್ರಸಿದ್ಧರಾಗಿದ್ದ ರಾಮಕೃಷ್ಣ ತಿಮ್ಮಯ್ಯ ಹೆಗಡೆ ಕಡವೆ ಅಂದಿನ ಕಾಲದಲ್ಲಿಯೇ ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧೀಜಿ ವಿಚಾರಧಾರೆಯಿಂದ ಪ್ರಭಾವಿತರಾಗಿ ಜನಸೇವೆಗೈಯ್ಯುವ ಮೂಲಕ ಕಡವೆ ಗಾಂಧಿ ಎನಿಸಿದ್ದರು. ಅವರ ಮಗ ಸಹಕಾರಿ ಧುರೀಣ ದಿ. ಶ್ರೀಪಾದ ಹೆಗಡೆಯವರದ್ದು ಆದರ್ಶ ವಿಚಾರಧಾರೆ. ಅಂದಿನ ಅವರ ಸಹಕಾರಿ ದೂರದರ್ಶಿತ್ವದ ಪ್ರತಿಫಲವೇ ಇಂದಿನ ಶತಮಾನ ಕಂಡ ಕೂಸಿ ಟಿಆರ್ಸಿ ಬ್ಯಾಂಕ್, ಶತಮಾನದ ಹೊಸ್ತಿಲಲ್ಲಿರುವ ಟಿಎಸ್ಎಸ್ ಇತ್ಯಾದಿ. ದಿ. ಕಡವೆ ಹೆಗಡೆಯವರು ಸುಧೀರ್ಘ ಅವಧಿಗೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದ್ದು ಇಲ್ಲಿ ಸ್ಮರಣೀಯ. ಜೊತೆಗೆ ಕಡವೆ ಕುಟುಂಬದ ಅಳಿಯ, ಟಿಎಸ್ಎಸ್ ಹಾಲಿ ಅಧ್ಯಕ್ಷರಾಗಿರುವ ಶಾಂತಾರಾಮ ಹೆಗಡೆ ಶೀಗೆಹಳ್ಳಿ ಸಹ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಕೆಪಿಸಿಸಿ ಕಾರ್ಯದರ್ಶಿ ಸೇರಿದಂತೆ ಪಕ್ಷದಲ್ಲಿ ಮಹತ್ವದ ಪಾತ್ರವನ್ನು ವಹಿಸಿದವರೇ ಆಗಿದ್ದಾರೆ.

    ಹೈಕಮಾಂಡ್ ಮಡಿಲಲ್ಲಿ ಅಭ್ಯರ್ಥಿಗಳು: ಜಿಲ್ಲಾ ಕಾಂಗ್ರೆಸ್ ಗೆ ಸಮನ್ವಯ ಮೂಡಿಸುವ ನಾಯಕರ ಹುಡುಕಾಟ:

    ಓರ್ವ ಕುಟುಂಬವಾಗಿ ಪಕ್ಷಕ್ಕೆ, ಜಿಲ್ಲೆಯ ಜನರಿಗೆ ಸಲ್ಲಿಸಿರುವ ಸೇವೆ, ಪಕ್ಷ ಸಂಘಟನೆಗೆ ನೀಡಿರುವ ಒತ್ತುಗಳನ್ನು ಗಮನದಲ್ಲಿರಿಸಿಕೊಂಡು ಜೊತೆಗೆ ಶ್ರೀಪಾದ ಹೆಗಡೆ ಕಡವೆಯವರ ಜನಾನುರಾಗಿ ವ್ಯಕ್ತಿತ್ವ, ಪಕ್ಷ ನಿಷ್ಠೆ ಪರಿಗಣಿಸಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಥಾನ ಕಲ್ಪಿಸಿದ್ದಲ್ಲಿ, ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಗೆ ಬಲ ತಂದೊಕೊಡುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಜಿಲ್ಲಾ ಕಾಂಗ್ರೆಸಿನಲ್ಲಿ ಬಣ ರಾಜಕೀಯ ವಿಪರೀತ ಮಟ್ಟಕ್ಕೆ ತೆರಳಿದ್ದು, ಅದೀಗ ಹಳಿಯಾಳಕ್ಕು ವ್ಯಾಪಿಸಿದ್ದು, ಪಕ್ಷದ ಹಿತಚಿಂತಕರ ಚಿಂತೆಗೆ ಕಾರಣವಾಗಿದೆ. ಮುಂದಿನ ದಿನದಲ್ಲಿ ಇದು ಹೆಚ್ಚಾದಲ್ಲಿ ಅಥವಾ ಇದುವೇ ಮುಂದುವರೆದಲ್ಲಿ ಪಕ್ಷಕ್ಕೆ ಯಾವ ಹಿಡಿತವೂ ಇಲ್ಲದಂತಾಗುವುದು ಖಚಿತ ವಿಚಾರ. ಆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು, ಜಿಲ್ಲೆಯ ನಾಯಕರ ನಡುವೆ ಸಮನ್ವಯ ಸಾಧಿಸುವ ನಾಯಕಗೆ ಹುಡುಕಾಟ ನಡೆಸುವುದು ಪಕ್ಷದ ಹೈಕಮಾಂಡಿಗೆ ಅನಿವಾರ್ಯವೂ ಹೌದು.

    ಅಂತಹ ಸಮನ್ವಯ ಸಾಧಿಸುವ ಕಾಂಗ್ರೆಸ್ ನಾಯಕರ ಸಾಲಿನಲ್ಲಿ ಪ್ರಸ್ತುತ ಶ್ರೀಪಾದ ಹೆಗಡೆ ಮೊದಲ ಪಂಕ್ತಿಯಲ್ಲಿ ಕಾಣುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಜೊತೆಗೆ ಜಾತಿ ರಾಜಕೀಯವನ್ನು ಸಮೀಕರಿಸಿದರೆ ವಿಧಾನಸಭಾ ಕ್ಷೇತ್ರದಲ್ಲಿ ಬಹುಸಂಖ್ಯಾತ ಮತದಾರರಿರುವ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ನಿಂದ ಇದೇ ಮೊದಲ ಬಾರಿಗೆ ಪರಿಷತ್ ಚುನಾವಣೆಗೆ ಅವಕಾಶ ನೀಡಿದರೆ, ಮುಂಬರುವ ವಿಧಾನಸಭೆಗೆ ಸೀಟು ಗೆಲ್ಲುವಲ್ಲಿ ಈ ನಿರ್ಧಾರ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ರಾಜಕೀಯ ವಿಶ್ಲೇ಼ಷಕರ ಮಾತಾಗಿದೆ. ಈ ಮೇಲಿನ ಎಲ್ಲ ಅಂಶಗಳ ಕಾರಣಕ್ಕೆ ಶ್ರೀಪಾದ ಹೆಗಡೆ ಕಡವೆ ಗೆಲ್ಲುವ ಕುದುರೆಯಾದರೆ ಅಚ್ಛರಿಯಿಲ್ಲ ಎಂಬುದು ಪಕ್ಷದ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಮಾತಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಹಾಗು ರಾಜ್ಯ ಹೈಕಮಾಂಡ್ ಯಾವ ಹಾದಿ ಹಿಡಿಯುತ್ತದೆ ಎಂಬುದನ್ನು ಜಿಲ್ಲೆಯ ಜನತೆ ಕಾದುನೋಡಬೇಕಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top