• Slide
  Slide
  Slide
  previous arrow
  next arrow
 • ವಿವಿಯಲ್ಲಿ ಎರಡು ದಿನಗಳ ಸಂಗೀತೋತ್ಸವ ಸಂಪನ್ನ: ಸಂಗೀತ ಒಂದು ವಿಜ್ಞಾನ; ಆನೂರು ಕೃಷ್ಣ ಶರ್ಮಾ

  300x250 AD


  ಗೋಕರ್ಣ: ‘ಸಂಗೀತದಲ್ಲಿ ಗಣಿತವಿದೆ, ಅದು ಒಂದು ವಿಜ್ಞಾನವೂ ಹೌದು. ಜ್ಞಾಪಕಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಂಗೀತ ಬಹಳ ಸಹಕಾರಿ. ಆಧುನಿಕ ಶಿಕ್ಷಣಕ್ಕೆ ಸಂಗೀತ ಪೂರಕ. ಆದ್ದರಿಂದ ವಿದ್ಯಾರ್ಥಿಗಳು ಒಂದು ಕಲೆಯಲ್ಲಾದರೂ ಪರಿಣತಿ ಸಾಧಿಸಬೇಕು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಸಲಹೆ ಮಾಡಿದರು.


  ಅಶೋಕೆಯ ವಿಷ್ಣುಗುಪ್ತ-ವಿಶ್ವವಿದ್ಯಾಪೀಠದ ಮಕ್ಕಳಿಗೆ ಸಂಗೀತಸಾಮ್ರಾಜ್ಯವನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಿದ್ದ ಎರಡು ದಿನಗಳ ಸಂಗೀತೋತ್ಸವ ಸಮಾರೋಪದಲ್ಲಿ ಅವರು ಮಾತನಾಡಿದರು.

  ಎರಡು ದಿನಗಳ ಸಂಗೀತೋತ್ಸವವನ್ನು ದೀಪಪ್ರಜ್ವಲನೆ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಲಾಯಿತು. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

  ಐತಿಹಾಸಿಕ ಮಂಗಲವಾದ್ಯ ಎನಿಸಿದ ನಾದಸ್ವರವನ್ನು ಸುಶ್ರಾವ್ಯವಾಗಿ ಮೈಸೂರಿನ ವಿಜಯಸೂರ್ಯ ತಂಡದವರು ನಡೆಸಿಕೊಟ್ಟರು. ಅನಂತರ ಪ್ರಖ್ಯಾತ ಹಿಂದುಸ್ಥಾನಿ ಕಲಾವಿದರಾದ ಸಿದ್ಧಾರ್ಥ ಬೆಳ್ಮಣ್ಣು ತಮ್ಮ ಕಂಠಸಿರಿಯಿಂದ ಎಲ್ಲರಿಗೂ ಸಂಗೀತರಸದೌರಣವನ್ನು ಉಣಬಡಿಸಿದರು. ಇವರಿಗೆ ಹಾರ್ಮೋನಿಯಂ ನಲ್ಲಿ ಪ್ರಜ್ಞಾನಲೀಲಾಶುಕ ಉಪಾಧ್ಯಾಯ ಹಾಗು ತಬಲಾದಲ್ಲಿ ಕಾರ್ತಿಕ್ ಭಟ್ಟ ಸಾಥ್ ನೀಡಿದರು. ಪ್ರಾಚೀನ ಮತ್ತು ನವೀನ ವಾದ್ಯ ಸಮ್ಮಿಲನ ನವತಾರ್. ವಿಷ್ಣು ರಾಮ್ ಪ್ರಸಾದ್ ನವತಾರ್ ವಾದ್ಯವನ್ನು ನುಡಿಸಿ, ಹೊಸ ಶೈಲಿಯ ವಾದ್ಯವೈಭವವನ್ನು ಸಭೆಗೆ ತೋರಿಸಿಕೊಟ್ಟರು. ಇವರಿಗೆ ನಾಗೇಂದ್ರ ಪ್ರಸಾದ್ ಮೃದಂಗ ಸಾಥ್ ಮತ್ತು ಸುನಾದ್ ಆನೂರು ಕಂಜರ ಸಾಥ್ ನೀಡಿದರು.

  ಮಧ್ಯಾಹ್ನ ಅತಿವಿಶಿಷ್ಟವೂ ವೈಭವದಿಂದಲೂ ಕೂಡಿದ ಲಯ-ಲಾವಣ್ಯ ಕಾರ್ಯಕ್ರಮವನ್ನು ಆನೂರು ಅನಂತಕೃಷ್ಣ ಶರ್ಮಾ ನೇತೃತ್ವದಲ್ಲಿ ಪ್ರಸ್ತುತಪಡಿಸಲಾಯಿತು. ಹನ್ನೊಂದು ಜನ ಕಲಾವಿದರು ಇಪ್ಪತ್ತಕ್ಕೂ ಹೆಚ್ಚು ವಾದ್ಯಗಳನ್ನು ನುಡಿಸಿ ಸಭೆಯನ್ನು ಗಂಧರ್ವಲೋಕವನ್ನಾಗಿಸಿದರು. ಕರ್ನಾಟಕ, ಹಿಂದುಸ್ಥಾನಿ, ಪಾಶ್ಚಾತ್ಯ ವಾದ್ಯಗಳ ಸಮ್ಮಿಲನ ಇದಾಗಿದ್ದು, ಸಂಗೀತದ ವ್ಯಾಪ್ತಿ ವಿಸ್ತಾರವಿದ್ದರೂ ಅದರ ಸೂರು ಒಂದೇ ಎನ್ನುವ ಸಂದೇಶವನ್ಬು ನೀಡಿದಂತಿತ್ತು. ಇದಾದ ನಂತರ ಹಿಂದುಸ್ಥಾನೀ ತಂತಿವಾದ್ಯಗಳಲ್ಲಿ ಒಂದಾದ ಸಿತಾರನ್ನು ಅಂಕುರ್ ನಾಯಕ್ ನಡೆಸಿಕೊಟ್ಟರು. ಇವರಿಗೆ ವಿಘ್ನೇಶ್ ಕಾಮತ್ ಸಾಥ್ ನೀಡಿದರು. ಬಾನ್ಸುರಿ ವಾದನವನ್ನು ಖ್ಯಾತ ಕಲಾವಿದರಾದ ಶಿವಲಿಂಗ್ ರಾಜಪುರ್ ಮಾಡಿದರೆ, ದೇಶ, ವಿದೇಶದಾದ್ಯಂತ ಸಂಗೀತದ ಮೂಲಕ ಹೆಸರುವಾಸಿಯಾದ ಟಿ.ವಿ ರಾಮ್ ಪ್ರಸಾದ್ ಕರ್ನಾಟಕ ಸಂಗೀತಸುಧೆಯನ್ನು ಹರಿಸಿದರು. ಇವರಿಗೆ ವಯೋಲಿನ್ ನಲ್ಲಿ ಜನಾರ್ದನ್, ಮೃದಂಗದಲ್ಲಿ ಶಿವು ಸರ್ ಹಾಗೂ ಮೋಜಿರ್‍ಂಗ್‍ನಲ್ಲಿ ಕಾರ್ತಿಕ್ ಪ್ರಣವ್ ಸಹಕರಿಸಿದರು. ಒಟ್ಟಿನಲ್ಲಿ ಬೆಳಗಿನಿಂದ ಸಂಜೆಯ ತನಕ ಗಂಧರ್ವಲೋಕವೇ ಧರೆಗಿಳಿದ ಅನುಭವ ಉಂಟಾಯಿತು.


  ಬೆಳಗ್ಗೆ ಆರಂಭವಾದ ಕಾರ್ಯಕ್ರಮವನ್ನು ಪ್ರಶಾಂತ್ ಗಾಂವ್ಕರ್ ನಿರೂಪಿಸಿದರೆ, ರಘುನಂದನ್ ಬೇರ್ಕಡವು ಸ್ವಾಗತಿಸಿದರು. ಶಿವಗುರುಕುಲದ ಮಕ್ಕಳು ವೇದಘೋಷದೊಡನೆ ಮಂಗಲಾರಂಭವನ್ನು ಮಾಡಿದರು. ಗುರುಕುಲದ ಪಾರಂಪರಿಕ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ, ಪ್ರಾಚಾರ್ಯ ಮಹೇಶ್ ಹೆಗಡೆ, ಉಪಪ್ರಾಚಾರ್ಯರಾದ ಸೌಭಾಗ್ಯ ಮತ್ತಿತರರು ಭಾಗವಹಿಸಿದ್ದರು.

  300x250 AD

  ಎರಡನೇ ದಿನ ಮೂಲತಃ ಕಾಶ್ಮೀರಿ ಜನಪಾದವಾದ್ಯವೆನಿಸಿದ, ಹಿಂದುಸ್ಥಾನಿ ಸಂಗೀತದ ಸಂತೂರ್ ವಾದನವನ್ನು ಕುಮಾರಿ ಸುಮಾ ಹೆಗಡೆ ನಡೆಸಿಕೊಟ್ಟರು. ಕಾರ್ತಿಕ್ ಭಟ್ಟ ಇವರಿಗೆ ತಬಲಾ ಸಾಥ್ ನೀಡದರು. ಅನಂತರ ಕರ್ನಾಟಕಸಂಗೀತ ಗಾಯನವನ್ನು ತಮ್ಮ ಸುಮಧುರ ಕಂಠಸಿರಿಯಿಂದ ನಡೆಸಿಕೊಟ್ಟವರು ತೇಜಸ್ವಿನೀ ಶಶಿಭೂಷಣ್. ಇವರಿಗೆ ವಯೋಲಿನ್ ನಲ್ಲಿ ಜನಾರ್ದನ್ ಹಾಗೂ ಮೃದಂಗದಲ್ಲಿ ವಿನೋದ್ ಶ್ಯಾಮ್ ಮತ್ತು ವಿದ್ಯಾಶಂಕರ್ ನೀಡಿದ ಸಾಥ್ ಗಾಯನಕ್ಕೆ ಪುಷ್ಟಿಕೊಟ್ಟಿತು.

  ಅನಂತರ ಗೋಪಾಲ್ ವೆಂಕಟ್ರಮಣ್ ವೀಣಾ ವಾದನವನ್ನು ನಡೆಸಿಕೊಟ್ಟರು. ತ್ಯಾಗರಾಜರ ಪ್ರಸಿದ್ಧ ಗೀತೆಗಳನ್ನು ತಂತಿಯ ಮೂಲಕ ಮಿಡಿದು ಜನಮನಹರಣ ಮಾಡಿದರು. ಇವರ ವಾದನಕ್ಕೆ ಸಹಕಾರವಿತ್ತವರು ಮೃದಂಗದಲ್ಲಿ ನಾಗೇಂದ್ರ ಪ್ರಸಾದ್, ಮೋಚಿರ್‍ಂಗ್ ನಲ್ಲಿ ಪ್ರಣವ್ ದತ್ತ್ ಮತ್ತು ಕೊನ್ನಕ್ಕೋಲಿನಲ್ಲಿ ಸೋಮಶೇಖರ್ ಇವರು.


  ಬಳಿಕ ಭಾವಸಂಗೀತ ಸಂಪನ್ನವಾಯಿತು. ಪ್ರಸಿದ್ಧ ಸುಗಮಸಂಗೀತ ಗಾಯಕರಾದ ಸನಿತಾ, ಮಂಗಳಾ ರವಿ, ರವಿ ಇವರು ಪುರಂದರದಾಸ, ಶಿಶುನಾಳ ಷರೀಫ್, ಕುವೆಂಪು, ಬೇಂದ್ರೆ, ಜಿ.ಎಸ್ ಶಿವರುದ್ರಪ್ಪ, ಜೆ.ಪಿ ರಾಜರತ್ನಂ, ಗೋಪಾಲಕೃಷ್ಣ ಅಡಿಗರೇ ಮೊದಲಾದ ಪ್ರಸಿದ್ಧ ಕವಿಗಳ ಪ್ರಸಿದ್ಧಗೀತೆಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು. ಇಡೀ ಸಭೆ ಭಾವಸಂಗೀತದಲ್ಲಿ ಮೈಮರೆಯಿತು. ಕೊಳಲಿನಲ್ಲಿ ಶಿವಲಿಂಗ್ ರಾಜಾಪುರ್, ಕೀ ಬೋರ್ಡ್ ನಲ್ಲಿ ಕೃಷ್ಣ ಉಡುಪ, ತಬಲಾದಲ್ಲಿ ಕಾರ್ತಿಕ್ ಭಟ್, ರಿದಮ್ ಪ್ಯಾಡ್ ನಲ್ಲಿ ಅಮೋಘವರ್ಷ ಸಾಥ ನೀಡಿದರು.

  ಕುಮಾರಿ ಸಂಜನಾ ರಾವ್ ಹಿಂದುಸ್ಥಾನಿ ಗಾಯನದ ಮೂಲಕ ಎರಡು ದಿನಗಳ ಸಂಗೀತೋತ್ಸವಕ್ಕೆ ತೆರೆ ಬಿದ್ದಿತು. ಮರಾಠಿ ಅಭಂಗ್ ಮತ್ತು ದಾಸರ ಪದಗಳನ್ನು ಹಾಡಿ ಭೈರವಿ ರಾಗದೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ವಿಘ್ನೇಶ್ ಕಾಮತ್ ತಬಲಾದಲ್ಲಿ ಮತ್ತು ಆನೂರು ಪ್ರಬೋಧ್ ಶ್ಯಾಮ್ ಹಾರ್ಮೋನಿಯಂ ನಲ್ಲಿ ಸಾಥ್ ನೀಡಿದರು

  Share This
  300x250 AD
  300x250 AD
  300x250 AD
  Leaderboard Ad
  Back to top