ಜೋಯಿಡಾ: ತಾಲೂಕಿನ ಪಣಸೂಲಿಯ ಎಲಿಪಂಟ್ ಕ್ಯಾಂಪ್ ನಲ್ಲಿ ಹಲವಾರು ವರ್ಷಗಳಿಂದ ಉಚಿತವಾಗಿ ನೋಡಲು ಸಿಗುತ್ತಿದ್ದ ಆನೆಗಳನ್ನು ಈಗ ಹಣ ಕೊಟ್ಟು ನೋಡಬೇಕಾದ ಅನಿವಾರ್ಯತೆ ಎದುರಾಗಿದ್ದು, ಅರಣ್ಯ ಇಲಾಖೆಯ ಈ ಕ್ರಮಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಹಲವಾರು ವರ್ಷಗಳಿಂದ ಅರಣ್ಯ ಇಲಾಖೆ ಅನೆಗಳನ್ನು ಸಾಕುತ್ತಿದೆ. ಇದರಬಗ್ಗೆ ಮೊದಲಿಂದಲೂ ಸ್ಥಳಿಯರಲ್ಲಿ ಅಸಮಾಧಾನ ಇದ್ದು, ಸಾಕಾನೆಗಳಿಂದಲೇ ಕಾಡಾನೆಗಳು ಹಳ್ಳಿಗೆ ಬರುತ್ತಿದ್ದು, ಬೆಳೆ ನಾಶಕ್ಕೆ ಕಾರಣವಾಗಿದೆ. ಕ್ಯಾಂಪನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದೂ ಇದೆ.
ಪಣಸೂಲಿ ಎಲಿಫಂಟ್ ಕ್ಯಾಂಪ್ ನಲ್ಲಿ ಹಾಲಿ ಮೂರು ಸಾಕಾನೆಗಳಿವೆ. ಈ ಆನೆಗಳನ್ನು ನೋಡಲು ಸ್ಥಳೀಯರಲ್ಲದೆ ಬೇರೆ-ಬೇರೆ ಊರುಗಳಿಂದಲೂ ಜನರು ಬರುತ್ತಿದ್ದರು. ಆದರೆ ಈಗ ಅರಣ್ಯ ಇಲಾಖೆ ಆರ್ಥಿಕ ಸಂಕಷ್ಟದ ನೆಪ ಹೇಳಿ ಆನೆ ನೋಡಲು ಬರುವ ಪ್ರತಿಯೊಬ್ಬರಿಂದ 50 ರೂ., ಮಕ್ಕಳಿಗೆ 25 ರೂ. ಶುಲ್ಕ ಆಕರಣೆ ಮಾಡಲು ಮುಂದಾಗಿದೆ. ನಂತರ ಆನೆಗಳ ಮೇಲೆ ಕುಳಿತುಕೊಳ್ಳಲು ಮಾವುತನಿಗೆ ಇಂತಿಷ್ಟು ಅಂತ ನೀಡಬೇಕು.
ಬರುವ ಆದಾಯದಿಂದ ಆನೆಗಳ ಆಹಾರ ಮತ್ತು ಮಾವುತನ ಶಂಬಳ ಭರಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಸರ್ಕಾರ ಮಾವುತನಿಗೆ ಭರಿಸುವ ಸಂಬಳ ನೀಡುತ್ತಿದೆ. ಅಲ್ಲದೇ ಹುಲಿ ಸಂರಕ್ಷಣಾ ಯೋಜನೆಗೂ ಸಾಕಷ್ಟು ಹಣ ನೀಡಲಾಗುತ್ತಿದೆ. ಅದನ್ನ ಇಲ್ಲಿ ಬಳಸಬಹುದಲ್ಲಾ ಎನ್ನುವುದು ಸ್ಥಳಿಯರ ಅಭಿಪ್ರಾಯ.
ಒಟ್ಟಿನಲ್ಲಿ ಪಣಸೂಲಿ ಎಲಿಫಂಟ್ ಕ್ಯಾಂಪ್ ನಲ್ಲಿ ಆನೆಗಳ ವೀಕ್ಷಣೆಗೆ ಶುಲ್ಕ ಆಕರಣೆ ಆರಂಭಿಸಿರುವುದು ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಗಿದ್ದಂತು ಸತ್ಯ.