ಶಿರಸಿ: ಟಿಎಸ್‍ಎಸ್ ಆಸ್ಪತ್ರೆಯಲ್ಲಿ 9.75 ಕೋಟಿ ರೂ. ವೆಚ್ಚದ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಹೃದಯ ಆರೋಗ್ಯ ಕೇಂದ್ರವನ್ನು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಲೋಕಾರ್ಪಣೆ ಮಾಡಿದರು.
ಶ್ರೀಪಾದ ಹೆಗಡೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಕೇಂದ್ರ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ಟಿಎಸ್‍ಎಸ್ ಆಸ್ಪತ್ರೆ ಎಂದೇ ಹೆಸರು ಪಡೆದು ಬೆಳೆಯುತ್ತಿರುವ ಆಸ್ಪತ್ರೆ ಇಂದು ಜನರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ. ಜನರ ವಿಶ್ವಾಸಕ್ಕೆ ತಕ್ಕಂತೆ ಸ್ಪಂದಿಸುವ ಸಾಮರ್ಥ್ಯ ಆಸ್ಪತ್ರೆಗೆ ಬರಲಿ ಎಂದು ಆಶಿಸಿದರು.
ಆಸ್ಪತ್ರೆಯಲ್ಲಿ ಜಿಲ್ಲೆಯ ಜನತೆಗೆ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಅಂತ ಚಿಕಿತ್ಸೆಗೂ ಅವಕಾಶ ಆಗಲಿ ಎಂದು ಆಶಿಸಿದ ಅವರು, ಸಹಕಾರಿ ವ್ಯವಸ್ಥೆಯೊಳಗೆ ಆಸ್ಪತ್ರೆಯನ್ನೂ ನಡೆಸಬಹುದು ಎಂದು ಟಿಎಸ್‍ಎಸ್ ಆಸ್ಪತ್ರೆ ತೋರಿಸಿ ಕೊಟ್ಟಿದ್ದಾರೆ ಎಂದರು. ಮನಸ್ಸಿನ ಒತ್ತಡವೇ ಹೃದಯಾಘಾತಕ್ಕೆ ಮೂಲ ಕಾರಣ. ಇದನ್ನ ಕಡಿಮೆ ಮಾಡಲು ಭಗವದ್ಗೀತೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇಂದಿನ ದಿನಮಾನದಲ್ಲಿ ಯುಕ್ತವಾದ ನಿದ್ರೆ, ಆಹಾರ, ಚಟುವಟಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.
ವೇಳೆ ಟಿಎಸ್‍ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ, ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ, ವ್ಯವಸ್ಥಾಪಕ ರವೀಶ ಹೆಗಡೆ ಹಾಗೂ ನಗರದ ಪ್ರಮುಖ ವೈದ್ಯರು ಇದ್ದರು.
17ನೇ ವರ್ಷಕ್ಕೆ ಟಿಎಸ್‍ಎಸ್ ಆಸ್ಪತ್ರೆ ಪಾದಾರ್ಪಣೆ: 2005 ರಲ್ಲಿ ಆರಂಭವಾದ ಟಿಎಸ್‍ಎಸ್ ಆಸ್ಪತ್ರೆ 17ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಇಲ್ಲಿಯ ವರೆಗೆ ಆಸ್ಪತ್ರೆಯಲ್ಲಿ 1.6 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಜಿಲ್ಲೆಯಲ್ಲಿ ಹಲವು ಸೌಲಭ್ಯಗಳನ್ನು ಮೊದಲ ಬಾರಿಗೆ ಆರಂಭಿಸಿದ ಕೀರ್ತಿ ಆಸ್ಪತ್ರೆಯದ್ದಾಗಿದೆ. ವಾರ್ಷಿಕ ಕಾರ್ಯಕ್ರಮದ ಪ್ರಯುಕ್ತ ಧನ್ವಂತರಿ ಹೋಮವನ್ನು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.