ಶಿರಸಿ: ಮನುಷ್ಯನ ಮಡಿವಂತಿಕೆಯಲ್ಲಿ ಜೀವ ಚೈತನ್ಯ ಅಡಗಿಲ್ಲ. ಅದನ್ನ ಮೀರಿಯೂ ಜೀವನೋತ್ಸಾಹ ಪಡೆಯಬಹುದು ಎಂದು ಪತ್ರಕರ್ತ ಗಂಗಾಧರ ಹಿರೇಗುತ್ತಿ ಹೇಳಿದರು.
ನಗರದ ಮಧುವನ ಹೊಟೇಲ್ ನ ಆರಾಧನ ಹಾಲ್ ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಉಮೇಶ ನಾಯ್ಕ್ ಅವರ ಕತ್ತಲ ಧ್ಯಾನಿಸಿದ ನಂತರ ಮತ್ತು ನಾಲ್ಕೇ ಕ್ಲಾಸು ಓದಿದವನು ಎನ್ನುವ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಇಂದಿನ ಯುವಕರಲ್ಲಿ ಸಾಹಿತ್ಯ ಸತ್ತು ಹೋಗಿದೆ. ಯುವಕರು ಬಂಡಾಯದ ಹಾದಿಯಲ್ಲಿ ನಡೆಯಬೇಕು ಎಂದರು.
ಸಾಹಿತಿ ನಾಗರಾಜ ಮತ್ತಿಹಳ್ಳಿ ಮಾತನಾಡಿ, ಜಾತ್ಯಾತೀತ ಗುಣ, ವೈಚಾರಿಕತೆ ಉಮೇಶ ನಾಯ್ಕ ಅವರ ಕೃತಿಯಲ್ಲಿ ಕಂಡುಬರುತ್ತದೆ. ಅದೇರೀತಿ ಅವರ ಬದುಕು ಸಹಾ ಇದೆ ಎನ್ನುವುದು ಸಂತೋಷದ ಸಂಗತಿ ಎಂದು ಹೇಳಿದರು. ನಾವೆಲ್ಲ ವಿಠಲ ಬಂಡಾರಿ ಅವರ ಎಡಪಂಥೀಯ ವಿಚಾರದಡಿ ಬೆಳೆದು ಬಂದವರು. ಆಗ ಅವರನ್ನು ಗಮನಿಸಿದಂತೆ ಹೇಳುವುದಾದರೆ ವ್ಯಕ್ತಿಯನ್ನು ನೋಡುವಾಗ ಅವರಿಗೆ ಎಂದೂ ವಿಚಾರಧಾರೆ ಅಡ್ಡಿಯಾಗುತ್ತಿರಲಿಲ್ಲ ಎಂದು ಹೇಳಿದರು.
ರಂಗಕರ್ಮಿ ಶ್ರೀಪಾದ ಭಟ್ ಮಾತನಾಡಿ, ಉಮೇಶ ನಾಯ್ಕ ಅವರ ಕೃತಿಯಲ್ಲಿ ಜೀವಕಾರುಣ್ಯದ ಸಾಮಾಜಿಕ ತುಡಿತ ಇದೆ ಎಂದು ಹೇಳಿದರು.
ಉತ್ತರ ಕನ್ನಡ ಕೋಮು ದಳ್ಳುರಿ ಮತ್ತು ಅಕ್ಷರಸ್ತರು ಮೌನಿಗಳಾಗಿರುವಾಗ ಉಂಟಾದ ಕ್ಷೋಭೆಯ ಸ್ಥಿತಿಯಲ್ಲಿ ದಿಟ್ಟತನದಿಂದ ಈ ಕೃತಿಯಲ್ಲಿ ಮಾತನಾಡಿದ್ದಾರೆ ಎಂದು ಹೇಳಿದರು.
ವಿಷ್ಣು ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಉಮೇಶ ನಾಯ್ಕ, ಬಂಡಾಯ ಪ್ರಕಾಶನದ ಸಂಚಾಲಕಿ ಯಮುನಾ ಗಾಂವ್ಕರ ಇದ್ದರು.