ಶಿರಸಿ: ಆಧುನಿಕ ಜೀವನದ ಮೊಬೈಲ್, ವಾಟ್ಸಪ್, ಇನ್‍ಸ್ಟ್ರಾಗ್ರಾಮ್, ಟಿವಿ, ಧಾರವಾಹಿಗಳ ಜಂಜಡದಿಂದ ದೂರ ತಂದು ಕೇವಲ ಗ್ರಾಮೀಣ ಭಾಗದ ಸೊಸಗಿನ ಆಟ, ಸ್ಪರ್ಧೆಗಳು, ಸಾಂಸ್ಕøತಿಕ ಕಾರ್ಯಕ್ರಮ, ಊರಿನ ಸಾಧಕರಿಗೆ ಸಮ್ಮಾನಗಳ ನಡುವೆ ಇಡೀ ಹಳ್ಳಿಗಳೇ ಒಂದಾಗಿ ಸಂಭ್ರಮಿಸಿದ ಘಟನೆ ತಾಲೂಕಿನ ಕೊಡ್ನಗದ್ದೆ ಗ್ರಾಮ ಪಂಚಾಯ್ತಿಯಲ್ಲಿ ಕಳೆ ಕಟ್ಟಿತು.
ಪರಿಸದ ಕುರಿತಾಗಿ ಪ್ರೀತಿ ಮತ್ತು ಕಾಳಜಿ ಮೂಡುವ ವಾತಾವರಣ ಸೃಷ್ಟಿಸಲು ಸುಂದರ ಪರಿಸರದ ಮಧ್ಯದಲ್ಲಿಯೇ ಅಕ್ಷರಶಃ ನಿಸರ್ಗ ರಂಗಸ್ಥಳದಲ್ಲಿ ಪ್ರಕೃತಿಯ ನಿಸರ್ಗ ರಂಗಭೂಮಿಯಲ್ಲಿ ಹಮ್ಮಿಕೊಂಡ ಎರಡು ದಿನಗಳ ಶಬರ ಸಂಸ್ಥೆಯು ಸ್ಥಳೀಯ ಮಾರಿಕಾಂಬಾ ದೇವಸ್ಥಾನ, ಸಹಕಾರದಲ್ಲಿ ಹಮ್ಮಿಕೊಂಡ ನಮ್ಮೂರ ಹಬ್ಬದ ಸ್ಪರ್ಧಾ ಕಾರ್ಯಕ್ರಮಗಳಿಗೆ ಮಕ್ಕಳಿಂದ ವೃಕ್ಷ ಪೂಜೆ ಮಾಡಿ ಚಾಲನೆ ನೀಡಿದರೆ, ಸಂಕಲ್ಪದ ಪ್ರಮೋದ ಹೆಗಡೆ ಯಲ್ಲಾಪುರ ಸಂಜೆಯ ಸಾಂಸ್ಕøತಿಕ, ಸಮ್ಮಾನ ಕಾರ್ಯಕ್ರಮಗಳಿಗೆ ಅಡಿಕೆ ಮರದ ಕೊನೆ ಕೊಯ್ಯುವ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಸ್ಪರ್ಧೆ, ಸಂಭ್ರಮ, ಸಮ್ಮಾನ:
ಕಲಾವಿದರುಗಳಿಗೆ ವೇದಿಕೆ ಕಲ್ಪಿಸುವದು. ಮತ್ತು ಗ್ರಾಮೀಣ ಮತ್ತು ಕೃಷಿ ಸಂಸ್ಕೃತಿಗೆ ಪೂರಕವಾದ ಆಟಗಳನ್ನು ಆಡಿಸುವದು, ಸ್ಪರ್ಧೆಗಳನ್ನು ಏರ್ಪಡಿಸುವದು, ಕೆಲವು ಅಪರೂಪದ ಕೃಷಿ ಬಳಕೆಯ ಸಾಮಗ್ರಿಗಳ ಪ್ರದರ್ಶನ ಹೀಗೆ ಹಲವು ವಿಧಗಳ ಹಬ್ಬದ ವಾತಾವರಣಗಳನ್ನು ಸೃಷ್ಟಿಸುವ ಚಟುವಟಿಕೆಗಳ ನಡುವೆ ನಮ್ಮೂರ ಹಬ್ಬ ಕಳೆ ಕಟ್ಟಿತ್ತು. ಎರಡು ದಿನಗಳ ಹಬ್ಬದಲ್ಲಿ ಮೊದಲ ದಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರಿಗೆ ಸಮ್ಮಾನ ನಡೆಯಿತು. ಶೀಲ್ಪಕಲೆ ಮತ್ತು ಯಕ್ಷಗಾನದಲ್ಲಿ ಸೇವೆಸಲ್ಲಿಸುತ್ತಿರುವ ವೆಂಕಟ್ರಮಣ ಹೆಗಡೆ ಬಾಳೆಕಾಯಿಮನೆ. ಪ್ರಗತಿಪರ ಕೃಷಿಕ ಅನಂತ ರಾಮಚಂದ್ರ ಹೆಗಡೆ ನೆಲ್ಲಳ್ಳಿಮಠ, ಜನಪದ ಕಲೆಯಲ್ಲಿ ಸಾಧನೆ ಮಾಡಿದ ತಿಮ್ಮಾ ಗುಡ ತುಂಬಳ್ಳಿ ಅವರನ್ನು ಸಮ್ಮಾನಿಸಲಾಯಿತು.
ಕೋಡ್ನಗದ್ದೆ ಪಂಚಾಯತ ವ್ಯಾಪ್ತಿಯ ಪುರುಷರಿಗೆ ಶಂಖನಾದ ಸ್ಪರ್ಧೆ ಮತ್ತು ಒಂದೇ ಒಂದು ನಿಮಿಷ ಸ್ಪರ್ಧೆಗಳಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಉತ್ಸಾಹದಿಂದ ಪಾಲ್ಗೊಂಡರು. ಮಹಿಳೆಯರಿಗೆ ಸಿಹಿ ತಿಂಡಿ ಸ್ಪರ್ಧೆ, ನೈಸರ್ಗಿಕ ವಸ್ತುಗಳನ್ನು ಬಳಸಿ ಆರತಿ ತಾಟಿನ ಸ್ಪರ್ಧೆ ಗಮನ ಸೆಳೆಯಿತು. ಮಧ್ಯಾಹ್ನ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ಪ್ರದರ್ಶನಗಳು ಮತ್ತು ಸ್ವ ಸಹಾಯ ಸಂಘಗಳ ಸದಸ್ಯರುಗಳಿಂದ ಭಜನಾ ಕಾರ್ಯಕ್ರಮ ಜರುಗಿತು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಿಮ್ಮಾ ಗೌಡ ಮತ್ತು ಗಣಪತಿ ಗೌಡ ಸಂಗಡಿಗರಿಂದ ಕೊಳಲಾಟ. ಬೆಳ್ಳಾ ಗೌಡ ಸಂಗಡಿಗರಿಂದ ಕೋಲಾಟ. ರಾಜು ಸಂಪೆ ಅವರಿಂದ ಹಾಸ್ಯ ವೈವಿಧ್ಯ, ಮಾರಿಕಾಂಬಾ ಪ್ರಾಸಾದಿತ ತಾಳಮದ್ದಳೆ ಕೂಟ ಮಣ್ಮನೆ ಇವರಿಂದ ಸುಭದ್ರಾ ಕಲ್ಯಾಣ ತಾಳಮದ್ದಳೆ ಕಾರ್ಯಕ್ರಮ ಕಳೆಕಟ್ಟಿತು. ಗಜಾನನ ಭಟ್ಟ ತುಳಗೇರಿ, ಪ್ರಶಾಂತ ಭಂಡಾರಿ, ರಾಧಾಕೃಷ್ಣ ಕಲ್ಚಾರ್, ಮಂಜುನಾಥ ಗೊರನಮನೆ, ರಾಮಚಂದ್ರ ಭಟ್ಟ ಶಿರಳಗಿ, ಅರುಣಕುಮಾರ ಭಟ್ಟ ಮತ್ತು ಪ್ರವೀಣ ಮಣ್ಮನೆ ಭಾಗವಹಿ ಕಾರ್ಯಕ್ರಮದಲ್ಲಿ ರಂಗೇರಿಸಿದರು.
ಎಲ್ಲಡೆ ಆಗಲಿ:
ಬಳಿಕ ಮಾತನಾಡಿದ ಪ್ರಮೋದ ಹೆಗಡೆ, ನಮ್ಮೂರು ಎಂದರೆ ಏನು ಎಂಬುದು ಯುವ ಜನರಿಗೆ ಗೊತ್ತಿಲ್ಲ. ಈ ಬಗ್ಗೆ ಅರಿವು ಮೂಡಿಸಲು ನಮ್ಮ ಕುರಿತು ನಾವೇ ತಿಳಿದುಕೊಳ್ಳಲು ಇಂಥ ಹಬ್ಬ ಪ್ರತಿ ಊರಿನಲ್ಲೂ ಆಗಬೇಕು. ನಮ್ಮೂರು ಎಂದರೆ ಏನು ಹೇಗೆ ಪ್ರಶ್ನೆ ಮಾಡಿಕೊಂಡು ಅರಿಯಬೇಕಾದ ಕಾಲ ಘಟ್ಟದಲ್ಲಿ ಇದ್ದೇವೆ ಎಂದ ಅವರು, ನಮ್ಮೂರ ಹಬ್ಬ ಪ್ರತಿ ಊರಿನಲ್ಲಿ ಆದರೆ ಸಂಸ್ಕಾರ ಸಂಸ್ಕøತಿ ಉಳಿಯುತ್ತದೆ ಎಂದು ಪ್ರತಿಪಾದಿಸಿದರು.
ಅಧ್ಯಕ್ಷರಾಗಿ ಮಾರಿಕಾಂಬಾ ದೇವಸ್ಥಾನದ ಅರ್ಚಕ ನಾರಾಯಣ ಹೆಗಡೆ ಮಣ್ಮನೆ ವಹಿಸಿದ್ದರು. ಶಿವಗಂಗಾ ಸ್ವ ಸಹಾಯ ಸಂಘಗಳ ಕ್ಕೂಟ ಅಧ್ಯಕ್ಷೆ ಸುನಂದಾ ಹೆಗಡೆ ಕಡೆಮನೆ, ಸಂಯೋಜಕರಾದ ನಾಗರಾಜ್ ಜೋಶಿ ಸೋಂದಾ, ಉತ್ಸವ ಸಮಿತಿ ಅಧ್ಯಕ್ಷ ಪ್ರವೀಣ ಹೆಗಡೆ, ಪ್ರಮುಖರಾದ ಭುವನೇಶ್ವರಿ ಜೋಶಿ, ರಾಮಚಂದ್ರ ಭಟ್ಟ ಶಿರಳಗಿ ಇತರರು ಇದ್ದರು. ಅರುಣಕುಮಾರ ಭಟ್ಟ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ನವದೆಹಲಿಯ ಸಂಸ್ಕøತಿ ಇಲಾಖೆ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಭಾಗಿತ್ವ ನೀಡಿದ್ದವು.