ಯಲ್ಲಾಪುರ: ಕಲಾವಿದರು ಹಾಗೂ ಕಲಾಭಿಮಾನಿಗಳ ನಡುವೆ ಸಂಘಟಕರು ಕೊಂಡಿಯಾಗಿದ್ದಾರೆ ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ತಾಲೂಕಿನ ನಂದೊಳ್ಳಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸಂಕಲ್ಪ ಉತ್ಸವದ ಎರಡನೇ ಭಾಗವಾಗಿ ಯಕ್ಷಕಲಾ ಬಳಗದ ಆಶ್ರಯದಲ್ಲಿ ದಿ.ಕಮಲಾ ಹಾಗೂ ಗೋಪಾಲ ಭಟ್ಟ ದೈಲ್ಮನೆ ಸ್ಮರಣಾರ್ಥ ಹಮ್ಮಿಕೊಂಡಿದ್ದ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕಲಾ ಸಂಘಟನೆ ಉತ್ತಮಗೊಳಿಸುವುದಕ್ಕಾಗಿ ಸಂಘಟಕರ ಒಕ್ಕೂಟ ರಚನೆಯಾಗಬೇಕು. ಕಲೆಗಾಗಿಯೇ ಮೀಸಲಾಗಿರುವ ಕಲಾಭವನದ ನಿರ್ಮಾಣವಾಗಬೇಕು. ಜಿಲ್ಲೆಯಲ್ಲಿ, ತಾಲೂಕಿನಲ್ಲಿ ಯಕ್ಷಗಾನ ಕಲೆ ವಿಜ್ರಂಭಿಸುವಂತಾಗಲು ಕಲಾಭಿಮಾನಿಗಳು, ಸಂಘಟಕರು, ಕಲಾವಿದರು ಒಟ್ಟಾಗಿ ಶ್ರಮಿಸಬೇಕೆಂದರು.
ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ಟ, ವೇ.ಗಣಪತಿ ಭಟ್ಟ ಮಾಗೋಡ, ಟಿ.ಎಸ್.ಎಸ್ ಶಾಖಾ ಸಲಹಾ ಸಮಿತಿ ಅಧ್ಯಕ್ಷ ನರಸಿಂಹ ಭಟ್ಟ ಗುಂಡ್ಕಲ್, ಎಪಿಎಂಸಿ ಮಾಜಿ ಅಧ್ಯಕ್ಷ ಎಲ್.ಪಿ.ಭಟ್ಟ ಗುಂಡ್ಕಲ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ, ಶ್ರೀಧರ ಭಟ್ಟ ದೈಲ್ಮನೆ, ಶ್ರೀಕೃಷ್ಣ ಭಟ್ಟ, ಮಹಾಬಲೇಶ್ವರ ಭಟ್ಟ ಇತರರಿದ್ದರು. ಸಂಘಟಕ ಎನ್.ಎಸ್.ಭಟ್ಟ ಸ್ವಾಗತಿಸಿದರು. ಎಂ.ಎನ್.ಭಟ್ಟ ನಿರ್ವಹಿಸಿದರು. ಪ್ರಸಿದ್ಧ ಕಲಾವಿದರಿಂದ ರತ್ನಾವತಿ ಕಲ್ಯಾಣ ಹಾಗೂ ನರಕಾಸುರ ವಧೆ ಯಕ್ಷಗಾನ ಪ್ರದರ್ಶನ ನಡೆಯಿತು.