ಶಿರಸಿ: ಎಮ್‌ಇಎಸ್ ನ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ೩೭ ವರ್ಷಗಳ ಕಾಲ ರಸಾಯನಶಾಸ್ತ್ರ ಉಪನ್ಯಾಸಕರಾಗಿ, ೫ ವರ್ಷ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತರಾದ ಡಾ ಎ.ಕೆ ಕಿಣಿ ಅವರಿಗೆ ಬೀಳ್ಕೊಡುಗೆ ಸಮಾರಂಭ ವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬಿಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಕ್ಷಕರಾದವರು. ವೃತ್ತಿ ಧರ್ಮ ಕರ್ತವ್ಯ ಪಾಲನೆಯ ಜೊತೆಗೆ ವೃತ್ತಿ ಗೌರವ ಹೆಚ್ಚಿಸಿಕೊಳ್ಳಬೇಕು. ಸಾಧ್ಯವಾದಷ್ಟು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವದು ಮುಖ್ಯ, ವಿದ್ಯಾರ್ಥಿಗಳ ಮನಸ್ಸನ್ನು ಅರ್ಥೈಸಿಕೊಂಡು ಸಮಾಲೋಚನೆ ಮಾಡಬೇಕು. ವಿದ್ಯಾರ್ಥಿಗಳು ಬೆಳೆದರೆ ನಾವು ಬೆಳೆದಂತೆ ಎಂದರು. ತಮ್ಮ ವೃತ್ತಿ ಜೀವನದಲ್ಲಿ ಪ್ರತಿಯೊಂದು ಸಂದರ್ಭದಲ್ಲೂ ಸಹಕರಿಸಿ ಮಾರ್ಗದರ್ಶಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ನೆನೆಸಿಕೊಂಡರು.
ಎಂ.ಇ.ಎಸ್ ನ ಪ್ರದಾನ ಕಾರ್ಯದರ್ಶಿ ಎಸ್ ಪಿ ಶೆಟ್ಟಿ ಮಾತನಾಡಿ ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ದೇವರು ಒಳ್ಳೆಯದನ್ನೆ ಮಾಡುತ್ತಾನೆ. ನಿವೃತ್ತರಾಗುವ ಪ್ರತಿಯೊಬ್ಬರೂ ತಮ್ಮ ವೃತ್ತಿ ಜೀವನದ ಕುರಿತು ಹಿಂತಿರುಗಿ ನೋಡಬೇಕು ಎಂದರು.
ಜಂಟಿ ಕಾರ್ಯದರ್ಶಿ ಡಾ.ಜಿ.ಎಸ್ ಭಟ್ ಉಪ್ಪೋಣಿ ಮಾತನಾಡಿ ಕಿಣಿ ಅವರಿಗೆ ಕಬ್ಬಿಣದ ಕಡಲೆಯಂತ ವಿಷಯ ವನ್ನು ಸುಲಲಿತವಾಗಿ ವಿದ್ಯಾರ್ಥಿಗಳಿಗೆ ಅರ್ಥೈಸುವ ಕಲೆ ಇತ್ತು. ನಿರಂತರವಾಗಿ ತಮ್ಮನ್ನು ಹೊಸ ವಿಷಯದ ಕಲೊಕೆಗೆ ತೊಡಗಿಸಿಕೊಳ್ಳುತ್ತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂಇಎಸ್ ನ ಅಧ್ಯಕ್ಷರಾದ ಜಿ ಎಂ ಹೆಗಡೆ ಮುಳಖಂಡ ಮಾತನಾಡಿ ವೃತ್ತಿ ಯಿಂದ ನಿವೃತ್ತಿ ಹೊಂದುವದು ಅನಿವಾರ್ಯ ಆದರೂ ಸುದೀರ್ಘ ಅನುಭವ ಹೊಂದಿರುವ ಕಿಣಿ ಅವರಂತವರ ಅನುಭವದ ಅಗತ್ಯತೆ ಸಂಸ್ಥೆಗೆ ಇದೆ ಎಂದರು.
ಈ ಸಂದರ್ಭದಲ್ಲಿ ಕಿಣಿ ಅವರು ಸಂಸ್ಥೆಗೆ ಒಂದು ಲಕ್ಷ ರೂಪಾಯಿ ದೇಣಿಗೆ ಮತ್ತು ಅವರ ಧರ್ಮಪತ್ನಿ ಅವರು ಒಂದು ಲಕ್ಷ ರೂಪಾಯಿ ದತ್ತಿನಿಧಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಎಂ ಇ ಎಸ್ ನ ಉಪಾಧ್ಯಕ್ಷ ರಾದ ಹಾಲಪ್ಪ ಜಕಲಣ್ಣನವರ್ ಕಜಾಂಚಿ ಸುಧೀರ್ ಭಟ್, ಕಾಲೇಜು ಉಪಸಮಿತಿಯ ಸದಸ್ಯರಾದ ಲೋಕೇಶ್ ಹೆಗಡೆ, ವಿನಾಯಕ ಹೆಗಡೆ, ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ ಟಿ ಎಸ್ ಹಳೇಮನೆ, ಪ್ರಾಧ್ಯಾಪಕರು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಾಚಾರ್ಯೆ ಡಾ ಕೋಮಲಾ ಭಟ್ ಪ್ರಾಸ್ತಾವಿಸಿ ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ಡಾ ಎಸ್ ಎಸ್ ಭಟ್ ನಿರೂಪಿಸಿದರು. ಪ್ರೊ ರವಿ ಕೋಳೆಕರ್ ವಂದಿಸಿದರು.